ಬೆಂಗಳೂರು: ರಾಜಧಾನಿ ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳು ಮುಂದುವರೆಯಲಿವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜನವರಿ 29ರವರೆಗೆ ಬೆಂಗಳೂರಿನಲ್ಲಿ ಶಾಲೆಗಳು ಬಂದ್ ಇರಲಿವೆ. ಜನವರಿ 29ರ ಸಭೆಯಲ್ಲಿ ಬೆಂಗಳೂರಿನಲ್ಲಿ ಶಾಲೆ ಆರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಉಳಿದ ಜಿಲ್ಲೆಗಳಲ್ಲಿ ಶಾಲೆಗಳು ಮುಂದುವರೆಯಲಿವೆ. ಶಾಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ನೋಡಿಕೊಂಡು ಶಾಲೆ ಬಗ್ಗೆ ಸ್ಥಳೀಯ ಅಧಿಕಾರಿಗಳು ನಿರ್ಧರಿಸುತ್ತಾರೆ. ಒಂದು ವೇಳೆ ಮಕ್ಕಳಲ್ಲಿ ಸೋಂಕು ಹೆಚ್ಚಾದರೆ ಒಂದು ಶಾಲೆಯಲ್ಲಿ 5 ಮಕ್ಕಳಿಗೆ ಸೋಂಕು ಪತ್ತೆಯಾದರೆ 3 ದಿನ ಶಾಲೆಗೆ ರಜೆ ನೀಡಲಾಗುವುದು. 25-30 ಮಕ್ಕಳಿಗೆ ಶಾಲೆಯಲ್ಲಿ ಸೋಂಕು ಕಂಡು ಬಂದರೆ 7 ದಿನಗಳವರೆಗೆ ಶಾಲೆಗೆ ರಜೆ ನೀಡಲಾಗುವುದು ಎಂದು ಹೇಳಿದರು.