ಬೆಂಗಳೂರು: ಇಂಧನ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದ್ದು, ಇದರ ಹೊರೆಯನ್ನು ಜನರ ಮೇಲೆ ಹೇರಲು ಇಲಾಖೆ ಮುಂದಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಸುನೀಲ್ ಕುಮಾರ್, ಸದ್ಯದಲ್ಲಿಯೇ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗುವುದು. ಇದು ಅನಿವಾರ್ಯ ಕೂಡ ಆಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಇಲಾಖೆಯ ಹೊಸ ಉಪ ವಿಭಾಗಗಳ ನಿರ್ಮಾಣ ಹಾಗೂ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿವೆ. ಇದಕ್ಕೆ ಅನುದಾನದ ಕೊರತೆಯಿದ್ದು, ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲಿದೆ ಎಂದು ಹೇಳಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳಿಂದ ಇಂಧನ ಇಲಾಖೆಗೆ ಸಾಕಷ್ಟು ಪ್ರಮಾಣದಲ್ಲಿ ಬಾಕಿ ಮೊತ್ತ ಬರಬೇಕಿದೆ. ಈ ಕುರಿತು ಸಿಎಂ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಬಾಕಿ ಮೊತ್ತ ಪಾವತಿಗೆ ಮನವಿ ಮಾಡಲಾಗುತ್ತದೆ. ಜಲಸಂಪನ್ಮೂಲ ಇಲಾಖೆ, ನಗರಾಭಿವೃದ್ಧಿ, ಬೆಂಗಳೂರು ಜಲ ಮಂಡಳಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಇನ್ನೂ ಹಲವು ಇಲಾಖೆಗಳಿಂದ ಸುಮಾರು 12 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿದಿದೆ ಎಂದು ಹೇಳಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ ಸುರಿದಿದೆ. ಅಲ್ಲದೇ, ಕಲ್ಲಿದ್ದಲ್ಲು ಸಮಸ್ಯೆ ಕೂಡ ಇಲ್ಲದಿರುವುದರಿಂದಾಗಿ ಬೇಸಿಗೆಯಲ್ಲಿ ವಿದ್ಯುತ್ ನ ಸಮಸ್ಯೆ ತಲೆದೋರುವುದಿಲ್ಲ ಎಂದು ಹೇಳಿದ್ದಾರೆ.