ಘಾನಾದಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ, ಸ್ಫೋಟಕಗಳನ್ನು ಸಾಗಿಸುತ್ತಿದ್ದ ಗಣಿಗಾರಿಕೆ ಟ್ರಕ್ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಕಟ್ಟಡಗಳೆಲ್ಲ ನೆಲಸಮವಾಗಿವೆ.
ನೈಋತ್ಯ ಘಾನಾದ ಅಪಿಯೇಟ್ ಎಂಬ ಸಣ್ಣ ಪಟ್ಟಣದಲ್ಲಿ ಘಟನೆ ನಡೆದಿದೆ. ನಿಖರವಾದ ಸಾವಿನ ಸಂಖ್ಯೆ ಇನ್ನೂ ತಿಳಿದಿಲ್ಲ. ಘಾನಾದ ಪೊಲೀಸ್ ಸೇವೆ ವಿಭಾಗದಿಂದ ತನಿಖೆ ನಡೆಯುತ್ತಿವೆ. ಗಾಯಾಳುಗಳಿಗೆ ಆಸ್ಪತ್ರೆ, ಚರ್ಚ್ ಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸಂತ್ರಸ್ಥರಿಗೆ ನೆರವಾಗಲು ಚರ್ಚ್ಗಳು, ಹತ್ತಿರದ ಪಟ್ಟಣಗಳ ನಿವಾಸಿಗಳಿಗೆ ಮನವಿ ಮಾಡಲಾಗಿದೆ.
ಟ್ರಕ್ ತರ್ಕ್ವಾ ಮತ್ತು ಚಿರಾನೊದ ಚಿನ್ನದ ಗಣಿಗಳ ನಡುವೆ ಚಲಿಸುತ್ತಿತ್ತು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ, ಹೆಚ್ಚಿನ ಗಾಯಾಳುಗಳನ್ನು ಹತ್ತಿರದ ಪಟ್ಟಣವಾದ ಬೊಗೊಸೊದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟದ ತೀವ್ರತೆಗೆ ಪಟ್ಟಣದ ಬಹುಭಾಗವನ್ನು ನೆಲಸಮಗೊಳಿಸಿದೆ. ವಿದ್ಯುತ್ ಮಾರ್ಗಗಳು ಸೇರಿ ಮೂಲ ಸೌಕರ್ಯ ವ್ಯವಸ್ಥೆಗೆ ಹಾನಿಯಾಗಿದೆ.
ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು ಟ್ರಕ್ ಗೆ ಬೆಂಕಿ ಹೊತ್ತಿಕೊಂಡಿತು ಎಂದು ಅಪಿಯಾಟ್ನ ನಿವಾಸಿ ಆರೋನ್ ಆವುಸು ಹೇಳಿದ್ದಾರೆ. ಎರಡೂ ವಾಹನಗಳ ಚಾಲಕರು ಓಡಿಹೋದರು, ಬೇರೆಯವರಿಗೂ ಅಲ್ಲಿಂದ ಓಡಿ ಹೋಗುವಂತೆ ಎಚ್ಚರಿಕೆ ನೀಡಿದರು. ಆದರೆ ಕೆಲವರು ತಮ್ಮ ಫೋನ್ ಗಳಲ್ಲಿ ದೃಶ್ಯ ಚಿತ್ರೀಕರಿಸುತ್ತಿದ್ದರು. ಆಗ ಭೀಕರ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ.