ಬೆಂಗಳೂರು: ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ ಯೋಜನೆಗೆ ಶೇ.15 ರಷ್ಟು ಸಹಾಯಧನ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇದರಿಂದ ಪಿಎಂಎಫ್ಎಂಇ ಯೋಜನೆಯ ಸಹಾಯಧನ ಶೇ. 50 ರಷ್ಟಾಗಿದೆ. ಕಿರು ಆಹಾರ ಸಂಸ್ಕರಣೆಯ ಉದ್ದಿಮೆಗಳನ್ನು ಉತ್ತೇಜಿಸುವ ಈ ಯೋಜನೆ ರೈತರ ಆದಾಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆಯು 5 ವರ್ಷಗಳ ಅವಧಿಗೆ 2020-21ನೇ ಸಾಲಿನಿಂದ 2024-25ನೇ ಸಾಲಿನವರೆಗೂ ಜಾರಿಯಲ್ಲಿರುತ್ತದೆ. 2021-22ನೇ ಸಾಲಿನಲ್ಲಿ 2651 ವೈಯಕ್ತಿಕ ಉದ್ದಿಮೆದಾರರಿಗೆ ಹಾಗೂ ಗುಂಪುಗಳಿಗಳಿಗೆ 100 ಉದ್ದಿಮೆಗಳ ಸ್ಥಾಪನೆಗೆ ಸಹಾಯಧನ ಒದಗಿಸುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.
ಇನ್ನು ರೈತರ ಆದಾಯ ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ಯೋಜನೆಗೆ ಪೂರಕವಾಗಿ ರಾಜ್ಯದಲ್ಲಿ ಪ್ರತ್ಯೇಕ ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪಿಸಲಾಗಿದೆ. ಈ ಮೂಲಕ ಕೃಷಿ ಉತ್ಪನ್ನಗಳ, ಉಪ ಉತ್ಪನ್ನಗಳ ತಯಾರಿಕೆಗೆ ರೈತರಿಗೆ ಅಗತ್ಯ ಸಹಕಾರ ನೀಡಿ, ಅವರ ಆದಾಯ ದ್ವಿಗುಣಗೊಳಿಸಲು ಯೋಜನೆ ರೂಪಿಸಲಾಗಿದೆ.