ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪೀಡಿಸಿದ ಹಿನ್ನೆಲೆಯಲ್ಲಿ ಬೇಸತ್ತ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆಯು ತಮಿಳುನಾಡಿನ ತಾಂಜಾವೂರಿನಲ್ಲಿ ನಡೆದಿದೆ.
ಆತ್ಮಹತ್ಯೆ ಯತ್ನದ ಬಳಿಕ ಸಾವು – ನೋವಿನ ನಡುವೆ ಹೋರಾಡುತ್ತಿದ್ದ ಲಾವಣ್ಯಳನ್ನು ಕೂಡಲೇ ತಾಂಜಾವೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಮೃತಪಟ್ಟ 17 ವರ್ಷದ ಲಾವಣ್ಯಾ ತಾಂಜಾವೂರಿನ ಸೇಂಟ್ ಮೈಕಲ್ಸ್ ಗರ್ಲ್ಸ್ ಹೋಮ್ ಎಂಬ ವಸತಿ ಗೃಹದಲ್ಲಿ ಇದ್ದಳು.
ಹಾಸ್ಟೆಲ್ ವಾರ್ಡನ್ ಯಾವಾಗಲೂ ಲಾವಣ್ಯಳಿಗೆ ನಿಂದಿಸುತ್ತಿದ್ದರು ಹಾಗೂ ಎಲ್ಲಾ ಕೊಠಡಿಗಳನ್ನು ಸ್ವಚ್ಛಗೊಳಿಸುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ.
ತನಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ನಿರಂತರವಾಗಿ ಪೀಡಿಸುತ್ತಿದ್ದರು ಎಂದು ಲಾವಣ್ಯ ಹೇಳಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಈ ಎಲ್ಲಾ ಘಟನೆಗಳಿಂದ ಮನನೊಂದಿದ್ದ ಯುವತಿಯು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಸ್ಪತ್ರೆಯಲ್ಲಿದ್ದ ಲಾವಣ್ಯಳ ಆರೋಗ್ಯ ಪರಿಸ್ಥಿತಿಯ ಬಗ್ಗೆ ಆಕೆಯ ತಂದೆ ಮುರುಗಾನಂದಂಗೆ ಮಾಹಿತಿ ನೀಡಲಾಗಿತ್ತು. ಮುರುಗಾನಂದಂಗೆ ಹೊಟ್ಟನೋವಿನಿಂದ ಬಳಲುತ್ತಿದ್ದ ಲಾವಣ್ಯ ವಾಂತಿ ಮಾಡಿಕೊಂಡಿದ್ದಾಳೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಹೇಳಲಾಗಿತ್ತು.
ಕೂಡಲೇ ಮುರುಗಾನಂದಂ ತನ್ನ ಮಗಳನ್ನು ತಾಂಜೋರ್ನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಶಿಫ್ಟ್ ಮಾಡಿಸಿದರು. ಈ ವೇಳೆಯಲ್ಲಿ ಪ್ರಜ್ಞಾ ಸ್ಥಿತಿಗೆ ಬಂದಿದ್ದ ಲಾವಣ್ಯ ತಾನು ವಿಷ ಸೇವನೆ ಮಾಡಿದ್ದರ ಬಗ್ಗೆ ವೈದ್ಯರಿಗೆ ತಿಳಿಸಿದ್ದಾಳೆ. ಇದಾದ ಬಳಿಕ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಹಾಸ್ಟೆಲ್ನ ವಾರ್ಡನ್ ಲಾವಣ್ಯಗಳಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪದೇ ಪದೇ ಪೀಡಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ದೂರನ್ನು ಆಧರಿಸಿ ಪೊಲೀಸರು 62 ವರ್ಷದ ವಾರ್ಡನ್ ಸಕಯಕುಮಾರಿಯನ್ನು ಬಂಧಿಸಿದ್ದಾರೆ.