ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಹೇಳಿದ್ದಾರೆ.
ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದ್ದ ಅವರು, ಸಾಕಷ್ಟು ಸ್ಪೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ. ನನ್ನನ್ನು ಒತ್ತಡಕ್ಕೆ ಸಿಲುಕಿಸಲು ಈ ಎಲ್ಲಾ ತಂತ್ರಗಳನ್ನು ನಡೆಸಲಾಗತ್ತಿದೆ ಎಂದು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದವರೇ ಹೇಳಿದ್ದಾರೆ ಎಂದು ಚರಣ್ಜೀತ್ ಸಿಂಗ್ ಚನ್ನಿ ಹೇಳಿದ್ದಾರೆ. ಅಕ್ರಮ ಮರಳುಗಾರಿಕೆ ಪ್ರಕರಣದ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಸಿಎಂ ಚರಣ್ಜೀತ್ ಸಿಂಗ್ ಚನ್ನಿ ಸಂಬಂಧಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ ಬೆನ್ನಲ್ಲೇ ಚನ್ನಿ ಈ ಹೇಳಿಕೆಯನ್ನು ನೀಡಿದ್ದಾರೆ.
ನನ್ನ ಮನೆಯಿಂದ ಯಾವುದೇ ಹಣವನ್ನು ವಶಪಡಿಸಿಕೊಂಡಿಲ್ಲ. ನನ್ನ ಸೋದರಳಿಯನನ್ನು ಸುಳ್ಳು ಪ್ರಕರಣದ ಅಡಿಯಲ್ಲಿ ಸಿಲುಕಿಸಿ ಬಂಧಿಸಲಾಗಿದೆ. ಸಧ್ಯ ಆತ ಎಲ್ಲಿದ್ದಾನೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದರು.
2018 ರ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಕುದ್ರತ್‌ದೀಪ್ ಸಿಂಗ್ ಅವರನ್ನು ಬಿಡುಗಡೆ ಮಾಡಲಾಗಿದೆ, ಆದರೆ ಅವರ ಸಂಬಂಧಿ ಭೂಪಿಂದರ್ ಸಿಂಗ್ ಹನಿ ಅವರನ್ನು ಆರೋಪಿಗಳೊಂದಿಗೆ ಸ್ನೇಹದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.