ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ. ಈ ಮೂಲಕ ಇಷ್ಟು ದಿನ ಹರಡಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿರುವ ಅಪರ್ಣಾ, ಬಿಜೆಪಿ ಪಕ್ಷಕ್ಕೆ ಹಾಗೂ ನಾಯಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ನನಗೆ ಅವಕಾಶ ನೀಡಿದ ಬಿಜೆಪಿಗೆ ಧನ್ಯವಾದ. ನಾನು ಯಾವಾಗಲೂ ಪ್ರಧಾನಿ ಮೋದಿಯವರಿಂದ ಪ್ರಭಾವಿತಳಾಗಿದ್ದೇನೆ. ನನಗೆ ರಾಷ್ಟ್ರ, ರಾಷ್ಟ್ರದ ಸೇವೆ ಮಾಡುವುದು ಮುಖ್ಯ, ಅದಕ್ಕೆ ಪ್ರಾಮುಖ್ಯತೆ ನೀಡುತ್ತೇನೆ. ಬಿಜೆಪಿ ಪಕ್ಷ ಸೇರಿ ರಾಷ್ಟ್ರದ ಸೇವೆ ಮಾಡಲು ಹೊರಟಿದ್ದೇನೆ ಎಂದಿದ್ದಾರೆ.
ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಗುಟುರು: ಲಿಂಗಮೂರ್ತಿ ವಿರುದ್ಧ ಆಕ್ರೋಶ
ನಾನು ಬೇರೆ ಪಕ್ಷದಲ್ಲಿದ್ದಾಗಲೂ, ನಮ್ಮ ಪ್ರಧಾನಮಂತ್ರಿ ಮತ್ತು ಯುಪಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೀತಿಗಳಿಂದ ಗಾಢವಾಗಿ ಪ್ರಭಾವಿತಳಾಗಿದ್ದೆ. ಈಗ ಅವರ ಪಕ್ಷದಲ್ಲೆ ಇದ್ದೇನೆ, ಅವರ ನೀತಿಗಳು ಏನೇ ಇರಲಿ ಅದಕ್ಕೆ ನಾನು ಬದ್ಧಳಾಗಿರುತ್ತೇನೆ ಎಂದು ಬಿಜೆಪಿಗೆ ಸೇರ್ಪಡೆಗೊಂಡ ನಂತರ ಅಪರ್ಣಾ ಯಾದವ್ ಹೇಳಿದ್ದಾರೆ.
2017ರಲ್ಲಿ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಸೋತಿದ್ದ ಅಪರ್ಣಾ ಅವ್ರಿಗೆ ಈ ಬಾರಿ ಬೇರೊಂದು ಕ್ಷೇತ್ರದಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇನ್ನು ಅಪರ್ಣಾ ನಂತರ ಮುಲಾಯಂ ಸಿಂಗ್ ಯಾದವ್ ಅವರ ಸೋದರ ಮಾವ ಪ್ರಮೋದ್ ಗುಪ್ತಾ ಕೂಡ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಅಪರ್ಣಾ ಯಾದವ್ ಅವರು ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿಯ ಮಗ ಪ್ರತೀಕ್ ಯಾದವ್ ಅವರ ಧರ್ಮಪತ್ನಿ. ಎಸ್ಪಿಯ ಪ್ರಸ್ತುತ ಅಧ್ಯಕ್ಷ ಅಖಿಲೇಶ್ ಯಾದವ್ ಮುಲಾಯಂ ಅವ್ರ ಮೊದಲ ಹೆಂಡತಿಯ ಮಗ.