ಮಾರ್ಚ್ 11 ರ ವೇಳೆಗೆ ಕೋವಿಡ್ ಸ್ಥಳೀಯವಾಗಿ ಹರಡುತ್ತದೆ ಎಂದು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ಸಮೀರನ್ ಪಾಂಡಾ ಅವರು ಹೇಳಿದ್ದಾರೆ.
ನಾವು ಲಸಿಕೆ ಸೇರಿದಂತೆ ಕೊರೋನಾ ನಿಯಮಗಳನ್ನ ಅನುಸರಿಸಿದರೆ ಮತ್ತು ಯಾವುದೇ ಹೊಸ ರೂಪಾಂತರವು ಹೊರಹೊಮ್ಮದಿದ್ದರೆ, ಮಾರ್ಚ್ 11 ರ ವೇಳೆಗೆ ಕೋವಿಡ್ ಸ್ಥಳೀಯವಾಗಿ ಬದಲಾಗುತ್ತದೆ. ಒಮಿಕ್ರಾನ್ ಡೆಲ್ಟಾ ರೂಪಾಂತರವನ್ನ ಸೋಲಿಸಿ, ಮತ್ಯಾವ ಹೊಸ ರೂಪಾಂತರ ರೂಪುಗೊಳ್ಳದಿದ್ದರೆ ಕೊರೋನಾ ಸ್ಥಳೀಯವಾಗುವ ಸಾಧ್ಯತೆಯಿದೆ ಎಂದು ಸಮೀರನ್ ಹೇಳಿದ್ಧಾರೆ.
ನಮ್ಮ ಲೆಕ್ಕಾಚಾರದ ಪ್ರಕಾರ ಒಮಿಕ್ರಾನ್ ಅಲೆ ಮೂರು ತಿಂಗಳವರೆಗೆ ಇರುತ್ತದೆ. ಅಂದ್ರೆ ಭಾರತದಲ್ಲಿ ಡಿಸೆಂಬರ್ 11 ಕ್ಕೆ ಶುರುವಾಗಿರುವ ಒಮಿಕ್ರಾನ್, ಮಾರ್ಚ್ 11 ರಿಂದ ಗಮನಾರ್ಹ ಇಳಿಕೆ ಕಾಣುತ್ತದೆ. ದೆಹಲಿ ಮತ್ತು ಮುಂಬೈ ಕೋವಿಡ್ ಪ್ರಕರಣಗಳ ಉತ್ತುಂಗವನ್ನು ತಲುಪಿದೆಯೇ, ಕೆಟ್ಟ ಪರಿಸ್ಥಿತಿ ಮುಗಿದಿದೆಯೆ ಎಂದು ಹೇಳಲು ನಾವು ಇನ್ನೂ ಎರಡು ವಾರ ಕಾಯಬೇಕಾಗಿದೆ. ದೆಹಲಿ ಮತ್ತು ಮುಂಬೈನ ಪ್ರಕರಣಗಳು ಮತ್ತು ಪಾಸಿಟಿವಿಟಿಯ ಕುಸಿತದ ಬಗ್ಗೆ ನಾವು ಈಗಲೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದಿದ್ದಾರೆ.
ಕೊರೋನಾ ವೈರಸ್, ವಿವಿಧ ರಾಜ್ಯಗಳಲ್ಲಿ ವಿವಿಧ ಹಂತಗಳಲ್ಲಿದೆ. ಕಾಲಘಟ್ಟದೊಂದಿಗೆ ವೈರಸ್ ರೂಪ ಬದಲಾಗುತ್ತಿದೆ ಹೀಗಾಗಿಯೆ ICMR ತನ್ನ ಪರೀಕ್ಷಾ ಕಾರ್ಯತಂತ್ರವನ್ನು ಬದಲಾಯಿಸಿದೆ. ಪರೀಕ್ಷೆಯನ್ನು ಕಡಿಮೆ ಮಾಡಬೇಡಿ ಎಂದು ನಾವು ಎಂದಿಗೂ ಯಾವ ರಾಜ್ಯಗಳಿಗೂ ಸಲಹೆ ನೀಡಿಲ್ಲ. ಬದಲಿಗೆ, ನಿರ್ದಿಷ್ಟ ಅಥವಾ ಉದ್ದೇಶಪೂರ್ವಕ ಪರೀಕ್ಷೆಗಳನ್ನು ನಡೆಸಿ ಎಂದಿದ್ದೇವೆ. ಸಾಂಕ್ರಾಮಿಕ ರೋಗದ ಗುಣವೇ ಬದಲಾಗಿರುವಾಗ, ಪರೀಕ್ಷೆ ಮತ್ತು ನಿರ್ವಹಣೆಯ ತಂತ್ರಗಳು ಬದಲಾಗಲೆ ಬೇಕು ಎಂದು ಸಮೀರನ್ ಹೇಳಿದ್ದಾರೆ.