ಬೆಂಗಳೂರು: ಕಾಂಗ್ರೆಸ್ ನಾಯಕರ ಪಾದಯಾತ್ರೆ ಬಗ್ಗೆ ನನಗೆ ಯಾವುದೇ ಆತಂಕವಿಲ್ಲ, ಅವರು ಇನ್ನು 5 ವರ್ಷ ಬೇಕಾದರೂ ಪಾದಯಾತ್ರೆ ಮಾಡಲಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿಸಿದ್ದೆವು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಸುಳ್ಳು. ಕಾಂಗ್ರೆಸ್ ಅಧಿಕಾರದಲ್ಲಿ ಯಾವುದೇ ಡಿಪಿಆರ್ ಮಾಡಿಲ್ಲ. ನಾನು ಸಿಎಂ ಆಗಿದ್ದಾಗ ಹಲವು ನೀರಾವರಿ ಯೋಜನೆ ಜಾರಿಗೆ ತಂದಿದ್ದೆ ಎಂದರು.
ಜನವರಿ 26ರಿಂದ ಜೆಡಿಎಸ್ ಆರಂಭಿಸಬೇಕಿದ್ದ ಜಲಧಾರೆ ಕಾರ್ಯಕ್ರಮ ಮುಂಡೂಡಲಾಗಿದೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯಿಂದ ಹಿಂದೆ ಸರಿದೆವು. 20 ದಿನಗಳ ಕಾಲ ಕಾರ್ಯಕ್ರಮ ಮುಂದೂಡಿದ್ದೇವೆ ಎಂದು ಹೇಳಿದರು.
ಇದೇ ಮೇಳೆ ಮಹದಾಯಿಗಾಗಿ ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಮಹದಾಯಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆದಿತ್ತು. ಹೆಣ್ಣು ಮಕ್ಕಳ ಮೇಲೂ ಪೊಲೀಸರು ಲಾಠಿ ಬೀಸಿದ್ದರು. ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ನೀರಾವರಿ ಯೋಜನೆಗಳು ನೆನಪಾಗುತ್ತವೆ. ಈಗ ಕಾಂಗ್ರೆಸ್ ನಾಯಕರು ಪಾದಯಾತ್ರೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳ ನಿಯಮಗಳಿಂದಲೇ ಬಡತನ ಹೆಚ್ಚಾಗುತ್ತಿವೆ. ಘೋಷಿಸಿದ ಯೋಜನೆಗಳನ್ನು ಜಾರಿಗೆ ತರುವುದು, ಜನರಿಗೆ ತಲುಪುವ ವ್ಯವಸ್ಥೆ ಇವರಿಗೆ ಬೇಕಿಲ್ಲ. ಹೊಸ ಯೋಜನೆ ಘೋಷಿಸುವುದಷ್ಟೇ ಕೆಲಸವಾಗಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಕೇಸ್ ಗಮನಿಸಿದರೆ 15 ದಿನ ಶಾಲೆಗಳಿಗೆ ರಜೆ ನೀಡುವುದು ಒಳಿತು. ಒಂದು ವೇಳೆ ನೈಟ್ ಕರ್ಫ್ಯೂ ಮುಂದುವರೆಸುವುದಾದರೆ ಸರ್ಕಾರ ಜನರಿಗೆ ಸಹಾಯ ಮಾಡಲಿ, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಲಿ ಎಂದು ಹೇಳಿದರು.