ಸಾವಯವ ಕೃಷಿ ಈಗ ವಿಶ್ವದೆಲ್ಲೆಡೆ ತುಂಬಾ ಪ್ರಚುರವಾಗುತ್ತಿದೆ. ಭಾರತದಲ್ಲೂ ಸಾವಯವ ಕೃಷಿಯನ್ನ ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ಕೃಷಿಯ ಮೂಲಕ ಮಧ್ಯಪ್ರದೇಶದ ಜಬಲ್ಪುರದ ರೈತರೊಬ್ಬರು ‘ಚೆರ್ರಿ ಟೊಮೆಟೋ’ ಎಂದು ಕರೆಯಲ್ಪಡುವ ವಿಶಿಷ್ಟವಾದ ಟೊಮೆಟೋ ಬೆಳೆಯನ್ನ ಬೆಳೆಯುತ್ತಿದ್ದಾರೆ. ಮೂಲಗಳ ಪ್ರಕಾರ ಒಂದು ಕೆ.ಜಿ. ಚೆರ್ರಿ ಟೊಮೆಟೋ ಬೆಲೆ 400 ರಿಂದ 600. ರೂ ಇದೆ. ವರ್ಷವಿಡೀ ಉತ್ಪಾದನೆ ನೀಡುವ ಚೆರ್ರಿ ಟೊಮೆಟೋಗೆ, ದೇಶದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಬೇಡಿಕೆಯಿದೆ.
ಅಂಬಿಕಾ ಪಟೇಲ್ ಎಂಬ ರೈತ ಈ ಟೊಮೆಟೋ ತಳಿಯನ್ನು ಉತ್ಪಾದಿಸಿ ಹಲವಾರು ವರ್ಷಗಳಿಂದ ಮಾರಾಟ ಮಾಡುತ್ತಿದ್ದಾರೆ. ಪಟೇಲ್ ಅವರು ಸಾವಯವ ಪದ್ಧತಿಯಲ್ಲಿ ಟೊಮೆಟೋ ಬೆಳೆಯುವ ಬಗ್ಗೆ ವ್ಯಾಪಕ ಅಧ್ಯಯನ ನಡೆಸಿ, ಹಲವಾರು ರೀತಿಯ ಟೊಮೆಟೋಗಳನ್ನು ಬೆಳೆದರು. ಕೊನೆಗೆ ಚೆರ್ರಿ ಟೊಮೆಟೋ ಅತ್ಯಂತ ಪ್ರಯೋಜನಕಾರಿ ಎಂದು ಕಂಡುಕೊಂಡರು. ಈ ಟೊಮೆಟೋವನ್ನು ಹೈಬ್ರಿಡ್ ಟೊಮೆಟೋ ಅಥವಾ ಹೆಚ್ಚಿನ ವಿಟಮಿನ್ ಅಂಶ ಹೊಂದಿರುವ ಟೊಮೆಟೋ ಎಂದು ಕರೆಯಲಾಗುತ್ತದೆ. ಈ ಟೊಮೆಟೋಗಳನ್ನು ಮಳೆಗಾಲದ ದಿನಗಳಲ್ಲಿ ಪಾಲಿಹೌಸ್‌ನಲ್ಲಿ ಬೆಳೆಸಬಹುದು ಎಂದು ಪಟೇಲ್ ಹೇಳಿದ್ದಾರೆ.
ಚೆರ್ರಿ ಟೊಮೆಟೋಗಳನ್ನು ಬೆಳೆಯುವುದು ಕಷ್ಟವೇನಲ್ಲ. ಪಾಲಿಹೌಸ್ ಆಗಲಿ, ಹೊಲಗಳಲ್ಲಾಗಲಿ ಕೃಷಿ ಮಾಡುವುದು ಕೂಡ ಸರಳವಾಗಿದೆ. ಹೆಸರಿಗೆ ತಕ್ಕಂತೆ ಗಾತ್ರದಲ್ಲಿ ಸಣ್ಣದಾಗಿರುವ ಟೊಮೆಟೋಗಳು ಹೆಚ್ಚಿನ ಇಳುವರಿ ನೀಡುತ್ತವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಮಾನ್ಯ ಟೊಮೆಟೋಗಳಿಗಿಂತ ಇವುಗಳಿಗೆ ಹೆಚ್ಚು ಬೇಡಿಕೆ ಇದ್ದು, ಒಳ್ಳೆ ಲಾಭವು ದೊರೆಯುತ್ತದೆ. ಇವುಗಳನ್ನ ದ್ರಾಕ್ಷಿಯಂತೆಯೇ ಅದೇ ಕಾಳಜಿಯೊಂದಿಗೆ ಪ್ಯಾಕ್ ಮಾಡಿ ಸಂರಕ್ಷಿಸಬೇಕು ಎಂದು ರೈತ ಪಟೇಲ್ ತಿಳಿಸಿದ್ದಾರೆ.