ಸುಚೇತಾ ಕೃಪಲಾನಿ, ಸ್ವಾತಂತ್ರ್ಯ ಹೋರಾಟಗಾರ್ತಿ, ರಾಜಕಾರಣಿ, ಮತ್ತು ಭಾರತ ಕಂಡ ಮೊದಲ ಮಹಿಳಾ ಮುಖ್ಯಮಂತ್ರಿ. 1963 ರಿಂದ 1967 ರವರೆಗೆ ಉತ್ತರ ಪ್ರದೇಶ ಸರ್ಕಾರದ ಸಿಎಂ ಆಗಿ ಸುಚೇತಾ ಸೇವೆ ಸಲ್ಲಿಸಿದ್ದರು.
ಕೃಪಲಾನಿ ಅವರು 1908 ರಲ್ಲಿ ಪಂಜಾಬ್ ನ ಅಂಬಾಲಾದಲ್ಲಿ (ಇಂದಿನ ಹರಿಯಾಣ) ಜನಿಸಿದರು. ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾದರು. 1936 ರಲ್ಲಿ, ಅವರು ತಮಗಿಂತಲೂ ಇಪ್ಪತ್ತು ವರ್ಷ ಹಿರಿಯರಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಸಿದ್ಧ ವ್ಯಕ್ತಿ ಜೆಬಿ ಕೃಪಲಾನಿ ಅವರನ್ನು ವಿವಾಹವಾದರು. ಅವರ ಮದುವೆಗೆ ಅವರಿಬ್ಬರ ಮನೆಯವರು ಮತ್ತು ಮಹಾತ್ಮ ಗಾಂಧಿಯವರು ವಿರೋಧ ವ್ಯಕ್ತಪಡಿಸಿದ್ದರು ಎಂಬ ಮಾತಿದೆ. ಆದರೆ ಸ್ವತಃ ಸುಚೇತಾ ಗಾಂಧಿಯವರ ಮನವೊಲಿಸಿದರು ಎನ್ನಲಾಗುತ್ತದೆ.
ಮದುವೆಯ ನಂತರ, ಸುಚೇತಾ ಅವರು ಕಾಂಗ್ರೆಸ್ ಗೆ ಸೇರಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು. 1942 ರ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ, ಸುಚೇತಾ ಅವರು ಅರುಣಾ ಅಸಫ್ ಅಲಿ ಮತ್ತು ಇತರ ಮಹಿಳಾ ನಾಯಕಿಯರ ಜೊತೆಗಿದ್ದರು. ಅಲ್ಲದೇ ಕಾಂಗ್ರೆಸ್ ನ ಮಹಿಳಾ ಮೋರ್ಚಾದ ಮೊದಲ ಅಧ್ಯಕ್ಷರಾದರು. ಸುಚೇತಾ ಬಗ್ಗೆ ಒಂದು ಕುತೂಹಲಕಾರಿ ಅಂಶವೆಂದರೆ ಅವರು ತಮ್ಮೊಂದಿಗೆ ಯಾವಾಗಲೂ ಸೈನೈಡ್ ಕ್ಯಾಪ್ಸುಲ್ ಗಳನ್ನು ಒಯ್ಯುತ್ತಿದ್ದರು.
1946 ರಲ್ಲಿ ನೊವಾಖಾಲಿಯಲ್ಲಿ (ಈಗಿನ ಬಾಂಗ್ಲಾದೇಶ) ಕೋಮು ಗಲಭೆಗಳು ಭುಗಿಲೆದ್ದು, ಉಗ್ರರೂಪ ತಾಳಿದ್ದವು. ಗಾಂಧೀಜಿ ಮತ್ತು ಅವರ ಪತಿ ಜೆಬಿ ಕೃಪಲಾನಿ ಅವರೊಂದಿಗೆ ಸುಚೇತಾ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಅಲ್ಲಿ ಮಹಿಳೆಯರು ಸಾಕಷ್ಟು ದೌರ್ಜನ್ಯಕ್ಕೆ ಒಳಗಾಗಿದ್ದನ್ನ ಸುಚೇತಾ ಕಣ್ಣಾರೆ ನೋಡಿದ್ದರು. ಇದೇ ಸುಚೇತಾರಿಗೆ ತಮ್ಮ ಬಳಿ ಸೈನೈಡ್ ಕ್ಯಾಪ್ಸೂಲ್ ಗಳನ್ನು ಇಟ್ಟುಕೊಳ್ಳಲು ಪ್ರಮುಖ ಕಾರಣ ಎನ್ನಲಾಗಿದೆ. ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗಲೂ ಸೈನೈಡ್ ಕ್ಯಾಪ್ಸೂಲ್ಗಳನ್ನ ಯಾವಾಗಲೂ ಇಟ್ಟುಕೊಂಡಿದ್ದರಂತೆ.