ಮಹಾರಾಷ್ಟ್ರದಲ್ಲಿ ಕಳೆದ 48 ದಿನಗಳಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಸಾವನ್ನಪ್ಪಿರುವ ಕೊರೋನಾ ಸೋಂಕಿತರಲ್ಲಿ, 68% ಮೃತರು ಲಸಿಕೆ ಪಡೆದಿರಲಿಲ್ಲ ಎಂದು ವರದಿಯಾಗಿದೆ. ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆಯ ಇತ್ತೀಚಿನ ರಿಪೋರ್ಟ್ ನಲ್ಲಿ ಈ ಮಾಹಿತಿ ಬಯಲಾಗಿದೆ.
ಇನ್ನುಳಿದ 32% ಜನರು ಸಂಪೂರ್ಣ ವ್ಯಾಕ್ಸಿನೇಟ್ ಆಗಿದ್ದವರು ಹಾಗೂ ಒಂದು ಡೋಸ್ ಪಡೆದವರು ಇದ್ದಾರೆಂದು ವರದಿ ತಿಳಿಸಿದೆ. 2021 ಡಿಸೆಂಬರ್ 1 ರಿಂದ 2022 ಜನವರಿ 17ರ ತನಕ ಮಹಾರಾಷ್ಟ್ರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 807 ಕೋವಿಡ್ ಸಾವುಗಳು ಸಂಭವಿಸಿವೆ.
ಮಹಾರಾಷ್ಟ್ರದ ಮೆಡಿಕಲ್ ಕಾಲೇಜುಗಳಲ್ಲಿರುವ ಆಸ್ಪತ್ರೆಗಳಲ್ಲಿ 151 ಜನರು ಕೊರೋನಾದಿಂದ ಸಾವನ್ನಪ್ಪಿದ್ದು, ಅದರಲ್ಲಿ 102 ಸೋಂಕಿತರು ಲಸಿಕೆ ಪಡೆದಿರಲಿಲ್ಲ, ಇನ್ನುಳಿದ 49 ಜನರಲ್ಲಿ ಹೆಚ್ಚು ಮಂದಿ ಒಂದು ಡೋಸ್ ಪಡೆದಿದ್ದರು, ಕೆಲವರು ಎರಡು ಡೋಸ್ ಪಡೆದಿದ್ದರು ಎಂದು ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಹಾರಾಷ್ಟ್ರದ ಕೋವಿಡ್ ತಾಂತ್ರಿಕ ಸಮಿತಿಯ ಅಧ್ಯಕ್ಷ ಡಾ ಸಂಜಯ್ ಓಕ್, ಈ ವರದಿ ನೋಡಿದರೆ ತಿಳಿಯುತ್ತಿದೆ ವ್ಯಾಕ್ಸಿನ್ ಪಡೆಯದಿರುವುದು ಎಷ್ಟು ಅಸುರಕ್ಷಿತ ಎಂದು. ನಾವು ಕಾನೂನಾತ್ಮಕವಾಗಿ ಲಸಿಕೆಯನ್ನ ಕಡ್ಡಾಯಗೊಳಿಸುವಂತಿಲ್ಲ, ಆದರೆ ಜನಸಾಮಾನ್ಯರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಹೆಚ್ಚೆಚ್ಚು ಜನರನ್ನ ಲಸಿಕೆ ಪಡೆಯಲು ಉತ್ತೇಜಿಸಬೇಕು ಎಂದಿದ್ದಾರೆ.