11 ಡೋಸ್ ಕೋವಿಡ್ ಲಸಿಕೆ ಪಡೆದ ಬಿಹಾರದ ಅಜ್ಜ ನಿಮಗೆ ನೆನಪಿರಬೇಕು. ವಿವಿಧ ಐಡಿ ಕಾರ್ಡ್ ಗಳನ್ನ ತೋರಿಸಿ ವಿವಿಧ ದಿನಾಂಕಗಳಲ್ಲಿ ಹನ್ನೊಂದು ಡೋಸ್ ಪಡೆದ 84 ವರ್ಷದ ಬ್ರಹ್ಮದೇವ್ ಮಂಡಲ್ ಮೇಲೆ ಬಿಹಾರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅವರನ್ನ ಬಂಧಿಸಬಹುದು ಎಂದು ಹೇಳಲಾಗಿತ್ತು, ಆದರೆ ಈಗ ಇರುವ ಮಾಹಿತಿಯಂತೆ ಅವರನ್ನ ವಾರಂಟ್ ಇಲ್ಲದೆ ಬಂಧಿಸಲಾಗುವುದಿಲ್ಲ. ಅವರ ವಯಸ್ಸನ್ನ ಪರಿಗಣಿಸಿ ಈ ಪರಿಹಾರ ನೀಡಲಾಗಿದ್ದು ಭಾರತ ದಂಡ ಸಂಹಿತೆಯ ನಿಬಂಧನೆಯಡಿಯಲ್ಲಿ ಅರೆಸ್ಟ್ ವಾರೆಂಟ್ ಇಲ್ಲದೆ ಅವ್ರನ್ನ ಬಂಧಿಸಲಾಗುವುದಿಲ್ಲ ಎಂದು ಪುರೈನಿಯ ಪೊಲೀಸ್ ಅಧಿಕಾರಿ ದೀಪಕ್ ಚಂದ್ರ ದಾಸ್ ಹೇಳಿದ್ದಾರೆ.
ಬಿಹಾರ ಪೊಲೀಸರು ಮಾಧೇಪುರ ಜಿಲ್ಲೆಯ ಪುರೈನಿ ಠಾಣೆಯಲ್ಲಿ ಮಂಡಲ್ ವಿರುದ್ಧ ಜನವರಿ 9 ರಂದು ಪ್ರಕರಣ ದಾಖಲಿಸಿದ್ದರು. ಮಂಡಲ್ ಅವರು ವಿವಿಧ ದಿನಾಂಕಗಳು ಮತ್ತು ಸ್ಥಳಗಳಲ್ಲಿ ವಿವಿಧ ಗುರುತಿನ ಚೀಟಿಗಳೊಂದಿಗೆ ಆರೋಗ್ಯ ಕಾರ್ಯಕರ್ತರನ್ನು ದಾರಿ ತಪ್ಪಿಸಿ 11 ಲಸಿಕೆ ಡೋಸ್ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಫೆಬ್ರವರಿ 13, 2021 ಮತ್ತು ಜನವರಿ 4, 2022 ರ ನಡುವೆ ಅವರು 11 ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಹ್ಮದೇವ್ ಅವರು ಲಸಿಕೆ ತೆಗೆದುಕೊಳ್ಳಲು ಪ್ರಾರಂಭಿಸಿದಾಗಿನಿಂದ ಅವರ ಆರೋಗ್ಯ ಸುಧಾರಿಸಿತು ಹಾಗೂ ಅನಾರೋಗ್ಯ ದೂರವಾಯಿತು ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಧೇಪುರದ ಸಿವಿಲ್ ಸರ್ಜನ್ ಡಾ. ಅಮರೇಂದ್ರ ಪ್ರತಾಪ್ ಶಾಹಿ, ಆತ ಹೇಳುತ್ತಿರುವುದು ನಿಜವೋ ಸುಳ್ಳೋ ಎಂಬುದು ತನಿಖೆಯಲ್ಲಿ ತಿಳಿಯಲಿದೆ. ನಾವು ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸುತ್ತೇವೆ ಮತ್ತು ಅವರು ಹೆಚ್ಚಿನ ಡೋಸ್ ಪಡೆದಿದ್ದರೆ, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ, ಎಂದಿದ್ದಾರೆ.