ತಮ್ಮ ಮನೆಗಳಲ್ಲಿ ಹಿಂಸೆ ಮತ್ತು ಕಿರುಕುಳವಾಗುತ್ತಿದೆ ಎಂದು ದೂರು ನೀಡಿರುವ ಮಹಿಳೆಯರ ಸಂಖ್ಯೆ 2020ಕ್ಕೆ ಹೋಲಿಸಿದರೆ 2021 ರಲ್ಲಿ ಗಮನಾರ್ಹ ಏರಿಕೆ ಕಂಡಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ವಾರ್ಷಿಕ ಡೇಟಾದಲ್ಲಿ ಈ ಅಂಕಿಅಂಶ ಹೊರಬಿದ್ದಿದೆ.
ಅದ್ರಲ್ಲೂ ಕೊರೋನಾ ಸಾಂಕ್ರಾಮಿಕ ಶುರುವಾದಾಗಿಂದ ಕೌಟುಂಬಿಕ ಹಿಂಸೆ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ. 2021ರಲ್ಲಿ ಮಹಿಳಾ ಆಯೋಗಕ್ಕೆ 30,865 ದೂರುಗಳನ್ನ ನೀಡಲಾಗಿದೆ. ಅದರಲ್ಲಿ 72.5% (22,379) ದೂರುಗಳನ್ನ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಘನತೆಯಿಂದ ಬದುಕುವ ಹಕ್ಕನ್ನು ಕಸಿದುಕೊಂಡಿರುವುದು 36%, ಕೌಟುಂಬಿಕ ಹಿಂಸೆಯಿಂದ ರಕ್ಷಣೆ 21.6%, ಮತ್ತು ವರದಕ್ಷಿಣೆ ಸೇರಿದಂತೆ ವಿವಾಹಿತ ಮಹಿಳೆಯರ ಕಿರುಕುಳದ ದೂರುಗಳು 15%
ಇನ್ನು ರಾಜ್ಯವಾರು ನೋಡುವುದಾದರೆ, 24 ವರ್ಗಗಳ ಎಲ್ಲಾ ದೂರುಗಳಲ್ಲಿ 51.3% ಉತ್ತರ ಪ್ರದೇಶದಿಂದ ಬಂದಿದ್ದು, ದೆಹಲಿ 10.8% ಮತ್ತು ಮಹಾರಾಷ್ಟ್ರ 4.9%ಮೂಲಕ ಮೂರನೇ ಸ್ಥಾನದಲ್ಲಿದೆ. 2020 ರಲ್ಲಿ ಸ್ವೀಕರಿಸಿದ ಒಟ್ಟು ದೂರುಗಳ ಸಂಖ್ಯೆ 23,722. ಅದೇ 2021 ರಲ್ಲಿ ದೂರುಗಳ ಸಂಖ್ಯೆ 30,865 ಕ್ಕೆ ಏರಿದ್ದು 30% ಹೆಚ್ಚಾಗಿದೆ.
ಸಾಂಕ್ರಾಮಿಕವು ಪ್ರಪಂಚದಾದ್ಯಂತ ಎಲ್ಲರಿಗೂ ಸವಾಲಾಗಿದೆ, ವಿಶೇಷವಾಗಿ ಮಹಿಳೆಯರಿಗೆ. ಹಿಂಸಾಚಾರದಿಂದ ಪೀಡಿತ ಮಹಿಳೆಯರಿಗಾಗಿ ಕಳೆದ ವರ್ಷ ಆಯೋಗ 24/7 ಸಹಾಯವಾಣಿಯನ್ನು (7827170170) ಪ್ರಾರಂಭಿಸಿತು. ಆಯೋಗವನ್ನ ನಂಬಿ ದೇಶದ ಹಲವು ಮಹಿಳೆಯರು ತಮ್ಮ ಕಷ್ಟಗಳಿಂದ ಮುಕ್ತಿ ಪಡೆಯಲು ಮುಂದೆ ಬರುತ್ತಿದ್ದಾರೆ. ನಮ್ಮ ಸಹಾಯವಾಣಿಗೆ ಪ್ರತಿದಿನ ಸುಮಾರು 400 ಕರೆಗಳು ಬರುತ್ತಿವೆ, ಸಹಾಯವನ್ನು ಕೋರಿ ವಾರಕ್ಕೆ ಸುಮಾರು 10 ತುರ್ತು ಕರೆಗಳು ಬರುತ್ತಿವೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ
ಆಯೋಗದ ಪೋರ್ಟಲ್ನಲ್ಲಿರುವ ಮಾಹಿತಿಯ ಪ್ರಕಾರ, ಘನತೆಯಿಂದ ಬದುಕುವ ಹಕ್ಕನ್ನು ಭದ್ರಪಡಿಸುವ ದೂರುಗಳು 2020 ರಲ್ಲಿ7,715 ಬಂದಿದ್ದವು. 2021, 11,084 ಕ್ಕೆ ಏರುವ ಮೂಲಕ 44%ಹೆಚ್ಚಾಗಿವೆ. 2020 ರಲ್ಲಿ 3,788 ದೂರುಗಳು ಬಂದಿದ್ದವು, 2021ರಲ್ಲಿ, ವರದಕ್ಷಿಣೆಗೆ ಸಂಬಂಧಿಸಿದ ವಿಷಯಗಳು ಸೇರಿದಂತೆ ವಿವಾಹಿತ ಮಹಿಳೆಯರಿಗೆ ಕಿರುಕುಳಕ್ಕೆ ಸಂಬಂಧಿಸಿದಂತೆ 4,613 ದೂರುಗಳನ್ನು ಸ್ವೀಕರಿಸಲಾಗಿದೆ.
ವರದಕ್ಷಿಣೆ ಸಾವಿಗೆ ಸಂಬಂಧಿಸಿದಂತೆ 2020 ರಲ್ಲಿ 330 ದೂರು, 2021 ರಲ್ಲಿ 341 ದೂರುಗಳು ಬಂದಿವೆ. 2021 ರಲ್ಲಿ, ಒಟ್ಟು ದೂರುಗಳಲ್ಲಿ ಸುಮಾರು 6% (1,839) ಪ್ರಕರಣಗಳು ಮಹಿಳೆಯರ ಕಿರುಕುಳದ ನಮ್ರತೆಯನ್ನು ಒಳಗೊಂಡ ಪ್ರಕರಣಗಳಾಗಿವೆ, ಇದು 2020 ರಲ್ಲಿ 1,679 ಇತ್ತು. 2020 ರಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ 376 ದೂರುಗಳಿಗೆ ಹೋಲಿಸಿದರೆ, ಕಳೆದ ವರ್ಷ NCW 624 ದೂರು ಸ್ವೀಕರಿಸಿದೆ. 2021ರಲ್ಲಿ ಕೌಟುಂಬಿಕ ಹಿಂಸೆ 6,682 ದೂರುಗಳು ಬಂದಿದ್ದು ಕಳೆದ ವರ್ಷಕ್ಕಿಂತ 26% ಹೆಚ್ಚಿದೆ.