alex Certify ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಇನ್ನಿಲ್ಲ

ಒಡಿಶಾದ ಖ್ಯಾತ ಗಾಂಧಿವಾದಿ ಮತ್ತು ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಅವರು ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿ ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಸತತ ಆರು ದಶಕಗಳ ಕಾಲ ಬಡವರ ಸೇವೆ ಮಾಡಿರುವ ಶಾಂತಿ ದೇವಿಯವರು ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಶಾಂತಿ ದೇವಿ ಅವರಿಗೆ ಇತ್ತೀಚೆಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು. ಒಡಿಶಾದ ಬಡವರ, ಕೆಳವರ್ಗದವರ, ಬುಡಕಟ್ಟು ಜನಾಂಗಕ್ಕೆ 60 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಶಾಂತಿದೇವಿಯವರು, ಯಾವ್ಸ್ ಎನ್ನುವ ಬ್ಯಾಕ್ಟೀರಿಯಾ ಸೋಂಕನ್ನ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ದುಡಿದವರು ಎಂದೇ ಹೆಸರುವಾಸಿಯಾಗಿದ್ದಾರೆ.

ಏಪ್ರಿಲ್ 18, 1934 ರಂದು ಬಾಲಸೋರ್‌ನಲ್ಲಿ ಜನಿಸಿದ ಶಾಂತಿ ದೇವಿ ಅವರನ್ನ 17 ನೇ ವಯಸ್ಸಿನಲ್ಲಿ ಡಾ ರತನ್ ದಾಸ್ ಅವರು ವಿವಾಹವಾದರು.‌ ವಿವಾಹದ ನಂತರ ಕೊರಾಪುಟ್‌ಗೆ ಬಂದ ಅವರು ತಮ್ಮ ಪತಿಯ ಬೆಂಬಲದೊಂದಿಗೆ ಸಾಮಾಜಿಕ ಕಾರ್ಯಕರ್ತೆಯಾಗಿ ಹೊಸ ಜೀವನವನ್ನು ಪ್ರಾರಂಭಿಸಿದರು. ಬುಡಕಟ್ಟು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದರು. 1955-56ರಲ್ಲಿ ಗಾಂಧಿ ಅನುಯಾಯಿ ಆಚಾರ್ಯ ವಿನೋಬಾ ಭಾವೆ ಅವರನ್ನ ಶಾಂತಿ ಭೇಟಿಯಾದರು. ಅವರ ಸಿದ್ಧಾಂತದಿಂದ ಪ್ರೇರಿತರಾದ ಶಾಂತಿ ಅವರು ಆದಿವಾಸಿಗಳು, ನಿರ್ಗತಿಕ ಮಹಿಳೆಯರು ಮತ್ತು ಅನಾಥ ಹೆಣ್ಣುಮಕ್ಕಳ ಅಭಿವೃದ್ಧಿಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಭೂದಾನ ಚಳವಳಿಯಲ್ಲೂ ಭಾಗವಹಿಸಿದರು.

ರಾಯಗಡ ಜಿಲ್ಲೆಯ ಗೋಬರಪಲ್ಲಿಯಲ್ಲಿ ಆಶ್ರಮವನ್ನು ಸ್ಥಾಪಿಸುವ ಮೂಲಕ ದೇವಿ ಸಾಮಾಜಿಕ ಕಾರ್ಯವನ್ನು ಪ್ರಾರಂಭಿಸಿದರು ಮತ್ತು ಬುಡಕಟ್ಟು ಹೆಣ್ಣುಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ ಶ್ರಮಿಸಿದರು. ನಂತರ, ಅವರು ಗುಣಪುರಕ್ಕೆ ಸ್ಥಳಾಂತರಗೊಂಡರು. ಇಲ್ಲಿಯ ಬುಡಕಟ್ಟು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು 1964 ರಲ್ಲಿ ಸೇವಾ ಸಮಾಜ ಆಶ್ರಮವನ್ನು ಸ್ಥಾಪಿಸಿದರು. ಜೀವನದುದ್ದಕ್ಕು ಹಲವಾರು ಸೇವಾಕಾರ್ಯಗಳನ್ನು ಮಾಡಿರುವ ಶಾಂತಿದೇವಿಯವರ ನಿಧನಕ್ಕೆ ಪ್ರಧಾನಿ ಮೋದಿ, ಒಡಿಶಾ ಸಿಎಂ ಸಂತಾಪ ಸೂಚಿಸಿದ್ದಾರೆ. ಉಳಿದ ರಾಜಕೀಯ ನಾಯಕರು ಸೇರಿದಂತೆ ವಿವಿಧ ವಲಯದ ಗಣ್ಯರು ಶಾಂತಿದೇವಿಯವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...