
125 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಹರಿಯಾಣ ಪೊಲೀಸರು, ಗಡಿ ಭದ್ರತಾ ಪಡೆಯ ಅಧಿಕಾರಿಯೊಬ್ಬರನ್ನ ಬಂಧಿಸಿದ್ದಾರೆ. ಹರಿಯಾಣದ ಗುರ್ಗಾಂವ್ ಜಿಲ್ಲೆಯ ಮನೇಸರ್ನಲ್ಲಿರುವ ರಾಷ್ಟ್ರೀಯ ಭದ್ರತಾ ಪಡೆ ಪ್ರಧಾನ ಕಚೇರಿಯಲ್ಲಿ (NSG), ಗಡಿ ಭದ್ರತಾ ಪಡೆಯ(BSF) ಡೆಪ್ಯುಟಿ ಕಮಾಂಡೆಂಟ್ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣ್ ಯಾದವ್ ಬಂಧಿತ ಆರೋಪಿ.
ಬಂಧಿತರಿಂದ ಐಷಾರಾಮಿ ಕಾರುಗಳು, ಚಿನ್ನಾಭರಣದಿಂದ ತುಂಬಿದ ಬ್ಯಾಗ್ಗಳು ಮತ್ತು 14 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪದ ಮೇಲೆ ಪ್ರವೀಣ್ ಯಾದವ್ ಅವರ ಪತ್ನಿ ಮಮತಾ ಯಾದವ್ ಮತ್ತು ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಹೋದರಿ ರಿತು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಡೆಪ್ಯೂಟಿ ಕಮಾಂಡೆಂಟ್ ಯಾದವ್, ಎನ್ಎಸ್ಜಿ ಕ್ಯಾಂಪಸ್ನಲ್ಲಿ ನಿರ್ಮಾಣದ ಕೆಲಸ ಕೊಡಿಸುತ್ತೇನೆ ಎಂದು ಆಸೆ ತೋರಿಸಿ ಬಿಲ್ಡರ್ಗಳಿಂದ ಕೋಟ್ಯಾಂತರ ರೂ. ಹಣ ಪಡೆಯುತ್ತಿದ್ದರು. ಇದಕ್ಕೆ ಅವರ ಪತ್ನಿ ಹಾಗೂ ಸಹೋದರಿಯೇ ಸಹಾಯ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಷೇರು ಮಾರುಕಟ್ಟೆಯಲ್ಲಿ 60 ಲಕ್ಷ ರೂಪಾಯಿ ಕಳೆದುಕೊಂಡಿದ್ದ ಯಾದವ್, ಜನರನ್ನು ವಂಚಿಸುವ ಮೂಲಕ ಹಣ ಮಾಡಲು ಸಂಚು ರೂಪಿಸಿದ್ದರು. ಹೀಗೆ ಜನರನ್ನ ವಂಚಿಸಿ ಪಡೆದ ಎಲ್ಲಾ ಹಣವನ್ನು ಎನ್ಎಸ್ಜಿ ಹೆಸರಿನಲ್ಲಿದ್ದ ನಕಲಿ ಖಾತೆಗೆ ವರ್ಗಾಯಿಸುತ್ತಿದ್ದರು. ಈ ಖಾತೆಯನ್ನು ಆಕ್ಸಿಸ್ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿರುವ ಅವರ ಸಹೋದರಿ ರಿತು ಯಾದವ್ ತೆರೆದಿದ್ದಾರೆ ಎಂದು ಗುರುಗ್ರಾಮದ ಎಸಿಪಿ ಪ್ರೀತ್ಪಾಲ್ ಸಿಂಗ್ ಹೇಳಿದ್ದಾರೆ.
ಬಂಧಿತರಿಂದ ಬಿಎಂಡಬ್ಲ್ಯು, ಜೀಪ್ ಮತ್ತು ಮರ್ಸಿಡಿಸ್ ನಂತಹ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಗರ್ತಲಾಕ್ಕೆ ವರ್ಗಾವಣೆಯಾಗಿದ್ದ ಪ್ರವೀಣ್ ಯಾದವ್ ಇತ್ತೀಚೆಗಷ್ಟೇ ಬಿಎಸ್ಎಫ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು ಎಂದು ತಿಳಿದುಬಂದಿದೆ.

