ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ದಿನಕ್ಕೊಂದು ರಾಜಕೀಯ ಡ್ರಾಮ ನಡೆಯುತ್ತಿದೆ. ಬಿಜೆಪಿಯಲ್ಲಿ ಒಂದು ರೀತಿಯಾದ್ರೆ, ಸಮಾಜವಾದಿ ಪಕ್ಷದಲ್ಲಿ ಮತ್ತೊಂದು ರೀತಿ.
ಈಗ ಕಾಂಗ್ರೆಸ್ ಚುನಾವಣೆಗೆ ಟಿಕೆಟ್ ನೀಡಲು ನಿರಾಕರಿಸಿದೆ ಎಂದು ಗುಲಾಬ್ ಗ್ಯಾಂಗ್ನ ಕಮಾಂಡರ್ ಸಂಪತ್ ಪಾಲ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಭಾನುವಾರ ಮಾಹಿತಿ ನೀಡಿರುವ ಸಂಪತ್, ಆಕೆಗೆ ಟಿಕೆಟ್ ಸಿಗದೆ ಇರುವುದಕ್ಕೆ ಕಾಂಗ್ರೆಸ್ ನ ಆಂತರಿಕ ರಾಜಕೀಯ, ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ರಾಜ್ಯದ ವೀಕ್ಷಕರನ್ನ ಹೊಣೆ ಮಾಡಿದ್ದಾರೆ. ಅಷ್ಟೇ ಅಲ್ಲಾ, ರಾಜ್ಯದ ‘ಆಂತರಿಕ ರಾಜಕೀಯ’ದ ಬಗ್ಗೆ ನವದೆಹಲಿಯ ಕಾಂಗ್ರೆಸ್ ವರಿಷ್ಠರಿಗೆ ತಿಳಿಸುವುದಾಗಿ ಹೇಳಿದ್ದಾರೆ.
ಪಾಲ್ ಅವರು 2012 ಮತ್ತು 2017 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೌ-ಮಾಣಿಕ್ಪುರ ಕ್ಷೇತ್ರದಿಂದ ಯುಪಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2012 ರ ಚುನಾವಣೆಯಲ್ಲಿ ಅವರು ಕೇವಲ 2,203 ಮತಗಳನ್ನು ಗಳಿಸಿದ್ದರು.
2017 ರಲ್ಲಿ ಅವರು SP-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾಗ 40,524 ಮತಗಳನ್ನು ಪಡೆದಿದ್ದರು. ಹೀಗಾಗಿ, ಕಾಂಗ್ರೆಸ್ ಈ ಬಾರಿ ಅವರ ಸ್ಥಾನಕ್ಕೆ ರಂಜನಾ ಭಾರತಿಲಾಲ್ ಪಾಂಡೆ ಅವರನ್ನು ಕಣಕ್ಕಿಳಿಸಿದೆ. ಸಂಪತ್ ಪಾಲ್ ಅವರು ‘ಗುಲಾಬ್ ಗ್ಯಾಂಗ್’ ಹೆಸರಿನ ಮಹಿಳಾ ಸಂಘಟನೆಯನ್ನು ನಡೆಸುತ್ತಿದ್ದಾರೆ. 2014ರಲ್ಲಿ ಈ ಸಂಘಟನೆಯ ಕುರಿತು ಗುಲಾಬ್ ಗ್ಯಾಂಗ್ ಅನ್ನೋ ಹಿಂದಿ ಚಿತ್ರ ರಿಲೀಸ್ ಆಗಿತ್ತು, ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಮತ್ತು ಜೂಹಿ ಚಾವ್ಲಾ ಮುಖ್ಯ ಪಾತ್ರಗಳನ್ನ ನಿಭಾಯಿಸಿದ್ದರು.