ದೇಶದಲ್ಲಿ ಕೊರೊನಾ ರೂಪಾಂತರಿಗಳ ಹಾವಳಿ, ಆರ್ಥಿಕ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದಾಗಿ ಮೋಟರ್ ಸೈಕಲ್‌ಗಳು, ಸ್ಕೂಟರ್‌ಗಳು ಸೇರಿ ಎಲ್ಲ ಬಗೆಯ ದ್ವಿಚಕ್ರ ವಾಹನಗಳ ಮಾರಾಟವು ಕಳೆದ 10 ವರ್ಷದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ದೇಶಾದ್ಯಂತ 20 ಲಕ್ಷ ದ್ವಿಚಕ್ರ ವಾಹನಗಳ ಮಾರಾಟವಾಗಿದೆ. ಒಂದು ತಿಂಗಳಲ್ಲಿ ಮಾರಾಟ ಪ್ರಮಾಣ ಶೇ.11 ರಷ್ಟು ಕುಸಿತವಾದಂತಾಗಿದೆ. ಹಾಗೆಯೇ, ಏಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ 1.2 ಕೋಟಿ ವಾಹನಗಳು ಮಾರಾಟವಾಗಿವೆ. ಇದು ಕಳೆದ 10 ವರ್ಷದಲ್ಲೇ ಕನಿಷ್ಠವಾಗಿದೆ. 2011ರ ಬಳಿಕ ಇದೇ ಮೊದಲ ಬಾರಿಗೆ ಒಂದು ವರ್ಷದಲ್ಲಿ ದ್ವಿಚಕ್ರ ವಾಹನಗಳ ಮಾರಾಟದ ಸಂಖ್ಯೆ ಇಷ್ಟೊಂದು ಕಡಿಮೆಯಾಗಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್‌ಐಎಎಂ) ಸಂಸ್ಥೆ ತಿಳಿಸಿದೆ.
ಕಳೆದ ಡಿಸೆಂಬರ್ ಒಂದೇ ತಿಂಗಳಲ್ಲಿಯೇ ಪ್ಯಾಸೆಂಜರ್ ವಾಹನಗಳ ಮಾರಾಟವೂ 2020ಕ್ಕೆ ಹೋಲಿಸಿದರೆ ಶೇ.15ರಷ್ಟು ಕುಸಿದರೆ, ಮೂರನೇ ತ್ರೈಮಾಸಿಕದಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ಶೇ.25ರಷ್ಟು ಕುಸಿತ ಕಂಡಂತಾಗಿದೆ.
ಕೊರೊನಾ ಲಾಕ್‌ಡೌನ್, ಕೊರೊನಾದಿಂದಾ ಉಂಟಾದ ಆರ್ಥಿಕ ಬಿಕ್ಕಟ್ಟು, ಭಾರತದಲ್ಲಿ ಕೋಟ್ಯಂತರ ಜನರಿಗೆ ಉಂಟಾದ ಹಣಕಾಸು ಸಮಸ್ಯೆ ಹಾಗೂ ಜಾಗತಿಕವಾಗಿ ಎದುರಾದ ದ್ವಿಚಕ್ರ ವಾಹನಗಳ ಉತ್ಪಾದನೆ ಹಾಗೂ ಪೂರೈಕೆ ಸಮಸ್ಯೆಯಿಂದಾಗಿ ದ್ವಿಚಕ್ರ ವಾಹನಗಳ ಮಾರಾಟ ಕಡಿಮೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ದ್ವಿಚಕ್ರ ವಾಹನಗಳ ಮಾರಾಟವು ಹೊಸ ವರ್ಷದ ಆರಂಭದಲ್ಲಾದರೂ ಏರಿಕೆಯಾಗುತ್ತದೆ ಎಂದು ಹೇಳಲಾಗುತ್ತಿತ್ತಾದರೂ ಓಮಿಕ್ರಾನ್ ಭೀತಿಯಿಂದಾಗಿ ಜನವರಿಯಲ್ಲಿಯೂ ಮಾರಾಟದ ಪ್ರಮಾಣ ಕುಂಠಿತವಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಆದರೂ, ಈ ವರ್ಷವಾದರೂ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂಬುದು ವಾಹನ ಉತ್ಪಾದಕರ ಆಶಾಭಾವವಾಗಿದೆ.