ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಷ್ಟೇ ಕೋವಿಡ್ ಕೇಸ್ ಪತ್ತೆಯಾದರೂ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವರು, ಟೆಲಿ ಕನ್ಸಲ್ಟೇಷನ್ ಮೂಲಕ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಮೂರನೇ ಅಲೆ ನಿಯಂತ್ರಣಕ್ಕೆ ವಿಶೇಷ ಸಿದ್ಧತೆ ಮಾಡಲಾಗುತ್ತಿದೆ. ಈಗಾಗಲೇ 10 ಸಾವಿರ ವೈದ್ಯರ ಜತೆ ಚರ್ಚಿಸಿದ್ದೇನೆ. ಕೋವಿಡ್ ಕೇಸ್ ಎಷ್ಟೇ ಪತ್ತೆಯಾದರೂ ಮನೆಯಿಂದಲೇ ಚಿಕಿತ್ಸೆ ಪಡೆದುಕೊಳ್ಳಬಹುದು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಸೆಲ್ಫ್ ಕೋವಿಡ್ ಟೆಸ್ಟ್ ಕಿಟ್ ಬಳಕೆ ಬಗ್ಗೆ ಪ್ರತಿಕ್ರಿಯಿಸಿದ ಡಾ.ಸುಧಾಕರ್, ಯಾರೂ ಕೂಡ ಸೆಲ್ಫ್ ಟೆಸ್ಟ್ ಕಿಟ್ ಬಳಸುವುದು ಸರಿಯಲ್ಲ, ಸೆಲ್ಫ್ ಕೋವಿಡ್ ಟೆಸ್ಟ್ ಕಾನೂನಾತ್ಮಕವಾಗಿ ಸರಿಯಲ್ಲ ಹಾಗಾಗಿ ಇಂತಹ ಟೆಸ್ಟ್ ಕಿಟ್ ಖರೀದಿ ಬಗ್ಗೆ ಜನರು ಮುಂದಾಗಬಾರದು ಎಂದು ಹೇಳಿದರು.
ಇದೇ ವೇಳೆ ಭಾರತದಲ್ಲಿ ಲಸಿಕಾ ಅಭಿಯಾನಕ್ಕೆ ಇಂದಿಗೆ ಒಂದು ವರ್ಷವಾಗಿದ್ದು, ಅಭಿಯಾನದಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ. ವಿಶ್ವದ ದೊಡ್ಡಣ್ಣ ಮಾಡುವಂತಹ ಕೆಲಸವನ್ನು ಭಾರತ ಮಾಡುತ್ತಿದೆ. ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಬಡ ರಾಷ್ಟ್ರಕ್ಕೆ ಲಸಿಕೆ ಹಂಚಿಕೆ ಮಾಡುತ್ತಿದ್ದೇವೆ. ವಿಶ್ವದ 36 ದೇಶಗಳಲ್ಲಿ ಶೇ.10ರಷ್ಟೂ ಲಸಿಕೆ ನೀಡಿಲ್ಲ. ಆದರೆ ಕರ್ನಾಟಕದಲ್ಲಿ ಶೇ.99ರಷ್ಟು ಮೊದಲ ಡೋಸ್ ಲಸಿಕೆ ಪೂರ್ಣಗೊಂಡಿದೆ. ಶೇ.80ರಷ್ಟು ಜನರು ಎರಡನೇ ಡೋಸ್ ಪಡೆದಿದ್ದಾರೆ ಎಂದರು.