ಫಿಕ್ಸಿಂಗ್ ಅನ್ನೋದು ಜೆಂಟಲ್ ಮನ್ ಗೇಮ್ ಗೆ ಭೂತವಾಗಿ ಕಾಡುತ್ತಿದೆ. ಇನ್ನು ಐಪಿಎಲ್ ಶುರುವಾಗಿಲ್ಲ ಈಗಲೇ ಕ್ರಿಕೆಟ್ ಫಿಕ್ಸಿಂಗ್ ದಂಧೆ ತಲೆ ಎತ್ತಿದ್ದು, ದೇಶಿ ಕ್ರಿಕೆಟ್ ಅನ್ನು ಬುಕ್ಕಿಗಳು ಟಾರ್ಗೆಟ್ ಮಾಡುತ್ತಿದ್ದಾರೆ. ಸಧ್ಯ ತಮಿಳುನಾಡಿನಲ್ಲಿ TNPL ಅಂದ್ರೆ ತಮಿಳುನಾಡು ಪ್ರಿಮಿಯರ್ ಲೀಗ್ ಗೆ ಸಿದ್ಧತೆ ನಡೆಯುತ್ತಿದೆ. ಪ್ರತಿವರ್ಷ ಈ ಲೀಗ್ ಅನ್ನು ನಡೆಸಲಾಗುತ್ತಿದೆ. ಈ ವರ್ಷದ ಶೆಡ್ಯೂಲ್ ಇನ್ನು ಫಿಕ್ಸ್ ಆಗಿಲ್ಲವಾದರೂ, TNPL ನ ಆಟಗಾರರೊಬ್ಬರಿಗೆ ಫಿಕ್ಸಿಂಗ್ ನಲ್ಲಿ ಭಾಗಿಯಾಗುವಂತೆ ಬೆಂಗಳೂರಿನಲ್ಲಿ ಕುಳಿತಿರುವ ಬುಕ್ಕಿಗಳು ಸಂದೇಶ ಕಳುಹಿಸಿದ್ದಾರೆ.
ಮುಂಬೈ, ಪಂಜಾಬ್, ಕೊಲ್ಕತ್ತಾದ ಐಪಿಎಲ್ ಟೀಮ್ ಗಳಲ್ಲಿ ಆಡಿದ್ದ ದೇಶಿ ಕ್ರಿಕಟರ್ ಸತೀಶ್ ರಾಜಗೋಪಾಲ್ ಸದ್ಯ ತಮಿಳುನಾಡಿನ ರಣಜಿ ಕ್ರಿಕೆಟ್ ತಂಡದ ಮುಖ್ಯ ಸದಸ್ಯ. ಈ ವರ್ಷದ TNPL ನಲ್ಲಿ ಚೆಪಾಕ್ ಸೂಪರ್ ಗಿಲ್ಲೀಸ್ ಪರ ಕಣಕ್ಕಿಳಿಯುತ್ತಿರುವ ಸತೀಶ್, ತಮಿಳುನಾಡಿನ ಖ್ಯಾತ ಆಲ್ರೌಂಡರ್ ಎಂದು ಗುರುತಿಸಿಕೊಂಡಿದ್ದಾರೆ. ಇವರನ್ನ ಟಾರ್ಗೆಟ್ ಮಾಡಿ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗುವಂತೆ ಬುಕ್ಕಿಗಳು ಆಫರ್ ನೀಡಿದ್ದಾರೆ. ಹಣದ ಆಸೆ ನೀಡಿ ಸತೀಶ್ ಅವ್ರಿಗೆ ಫಿಕ್ಸಿಂಗ್ ನಲ್ಲಿ ಶಾಮೀಲಾಗುವಂತೆ, ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಕಳುಹಿಸಿದ್ದಾರೆ.
ಮುಂಬರುವ TNPL ನಲ್ಲಿ ಫಿಕ್ಸಿಂಗ್ ನಲ್ಲಿ ಭಾಗಿಯಾಗಬೇಕು, ಈಗಾಗಲೇ ಇಬ್ಬರು ಆಟಗಾರರು ಫಿಕ್ಸಿಂಗ್ ಗೆ ಒಪ್ಪಿದ್ದಾರೆ. ನೀವು ಭಾಗಿಯಾದ್ರೆ ಪ್ರತಿ ಪಂದ್ಯಕ್ಕೆ 40 ಲಕ್ಷ ನೀಡುತ್ತೇವೆ ಎಂದು ಬನ್ನಿ ಆನಂದ್ ಎಂಬ ಹ್ಯಾಂಡಲ್ ನಿಂದ ಸತೀಶ್ ರಾಜಗೋಪಾಲ್ ಗೆ ಇನ್ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಲಾಗಿದೆ. ಆದ್ರೆ ಈ ಗಾಳಕ್ಕೆ ಬೀಳದ ಸತೀಶ್, ಈ ಬಗ್ಗೆ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಈ ಇನ್ಸ್ಟಾ ಹ್ಯಾಂಡಲ್ ಬೆಂಗಳೂರಿನಿಂದ ನಿರ್ವಹಣೆಯಾಗುತ್ತಿರುವುದನ್ನ ಪತ್ತೆಹಚ್ಚಿದ ಬಿಸಿಸಿಐನ ಸೌತ್ ಜೋನ್ ಆ್ಯಂಟಿ ಕರೆಪ್ಷನ್ ಯೂನಿಟ್, ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದೆ. ಅಲ್ಲದೇ ಈ ವಿಷಯವಾಗಿ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.