ಪುಣೆ: ಪುಣೆಯ ಗುರುವಾರ್ ಪೇಠ್ ಪ್ರದೇಶದ 38 ವರ್ಷದ ವ್ಯಕ್ತಿಯೊಬ್ಬ 35 ವರ್ಷದ ಮಹಿಳೆಯನ್ನು ಅನುಚಿತ ರೀತಿಯಲ್ಲಿ ಮುಟ್ಟಿದ್ದಾನೆ. ಇದನ್ನು ಖಂಡಿಸಿದ ಒಂದು ದಿನದ ನಂತರ ಆಕೆಯನ್ನು ಕೊಲ್ಲಲು ಯತ್ನಿಸಿದ್ದಾನೆ. ಕೊಂಡ್ವಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಜನವರಿ 11 ರಂದು ಮಹಿಳೆ ತನ್ನ ಪತಿಯೊಂದಿಗೆ ಕ್ಯಾಂಪ್ ಪ್ರದೇಶಕ್ಕೆ ಖರೀದಿಗೆ ಹೋಗಿದ್ದಾಗ ಆರೋಪಿ ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಸಾರ್ವಜನಿಕವಾಗಿ ಆತ ಅನುಚಿತ ವರ್ತನೆ ತೋರಿದ್ದಕ್ಕೆ ಮಹಿಳೆ ಕಿಡಿಕಾರಿ ಬೈದಾಡಿದ್ದಾಳೆ.
ಮರುದಿನ ಮಹಿಳೆ ತನ್ನ ಪತಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರ್ ನಲ್ಲಿ ಹಿಂಬಾಲಿಸಿದ ಆರೋಪಿ ಕೊಂಡ್ವಾ ಪ್ರದೇಶದಲ್ಲಿ ಬೈಕ್ ಗೆ ತನ್ನ ಕಾರ್ ನಿಂದ ಡಿಕ್ಕಿ ಹೊಡೆದು ಕೊಲ್ಲಲು ಯತ್ನಿಸಿದ್ದಾನೆ. ದ್ವಿಚಕ್ರ ವಾಹನದಿಂದ ಮಹಿಳೆ, ಆಕೆಯ ಪತಿ ಕೆಳಗೆ ಬಿದ್ದಿದ್ದಾರೆ ಎಂದು ದೂರು ನೀಡಲಾಗಿದೆ.
ಘಟನೆಯಲ್ಲಿ ಮಹಿಳೆ ಮತ್ತು ಆಕೆಯ ಪತಿ ಗಾಯಗೊಂಡಿದ್ದಾರೆ. ಅಜಾಗರೂಕತೆಯಿಂದ ಚಾಲನೆ ಮಾಡಿದ್ದಕ್ಕಾಗಿ ಆರೋಪಿಯನ್ನು ಪ್ರಶ್ನಿಸಿದಾಗ, ಅವನು ತನಗೆ ಥಳಿಸಿದನೆಂದು ಮಹಿಳೆ ಆರೋಪಿಸಿದ್ದಾಳೆ ಎಂದು ಅಧಿಕಾರಿ ಹೇಳಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307(ಕೊಲೆ ಯತ್ನ), 323(ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಮತ್ತು 354(ಹೆಣ್ಣಿನ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲವನ್ನು ಬಳಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.