ಬೆಂಗಳೂರು: ಸರ್ಕಾರ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಮಾಡಿದೆ. ಆದರೆ, ಇದರಿಂದ ಶೇಕಡ 50 ರಷ್ಟು ಅತಿಥಿ ಉಪನ್ಯಾಸಕರ ಉದ್ಯೋಗಕ್ಕೆ ಕುತ್ತು ಬಂದಿದೆ. ರಾಜ್ಯದ 430 ಪ್ರಥಮದರ್ಜೆ ಕಾಲೇಜುಗಳಲ್ಲಿ 14,578 ಅತಿಥಿ ಉಪನ್ಯಾಸಕರು ಇದ್ದಾರೆ. ಅವರಲ್ಲಿ ಸುಮಾರು 7 ಸಾವಿರ ಮಂದಿಗೆ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ರಾಜ್ಯ ಸರ್ಕಾರ ಯುಜಿಸಿ ನಿರ್ದೇಶನದಂತೆ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಮಾಡಿದೆ. ಆದರೆ, ಹಾಲಿ ಅತಿಥಿ ಉಪನ್ಯಾಸಕರಿಗೆ 8 ರಿಂದ 10 ಗಂಟೆಗಳ ಕಾರ್ಯಭಾರಕ್ಕೆ ಬದಲಾಗಿ 15 ಗಂಟೆಗಳ ಕಾರ್ಯಭಾರ ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ 8 ಕಡಿತವಾಗಿ ಮತ್ತೊಬ್ಬ ಉಪನ್ಯಾಸಕರ ಉದ್ಯೋಗಕ್ಕೆ ಕುತ್ತು ಬರಲಿದೆ. ಹಾಲಿ 8 ರಿಂದ 10 ಗಂಟೆಗೆ ಕಾರ್ಯಭಾರದ ಉದ್ಯೋಗಕ್ಕೆ ಗೌರವಧನ ಹೆಚ್ಚಳ ಮಾಡದೆ 15 ಗಂಟೆ ಕಾರ್ಯಭಾರ ಹೆಚ್ಚಿಸಿ ಗೌರವಧನ ಹೆಚ್ಚಳ ಮಾಡಲಾಗಿದೆ.
ಇನ್ನು 10 ತಿಂಗಳಿಗೊಮ್ಮೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ, ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಬಿಟ್ಟು ಖಾಲಿ ಹುದ್ದೆಗಳಿಗೆ ಮಾತ್ರ ಹೊಸದಾಗಿ ಅರ್ಜಿ ಕರೆಯದೆ ಪ್ರತಿವರ್ಷ ಎಲ್ಲ ಹುದ್ದೆಗಳಿಗೆ ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದರಿಂದ ಹಾಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಸೇವಾ ಭದ್ರತೆ ನೀಡಬೇಕೆಂಬುದು ಪ್ರಮುಖ ಬೇಡಿಕೆಯಾಗಿದ್ದರೂ, ಅದನ್ನು ಸರ್ಕಾರ ಪರಿಗಣಿಸಿಲ್ಲ. ಈ ಎಲ್ಲಾ ಸಮಸ್ಯೆಗಳು ಹಾಗೆಯೇ ಮುಂದುವರೆದಿವೆ. ಸರ್ಕಾರ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರೆಸಲು ಅತಿಥಿ ಉಪನ್ಯಾಸಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.