ವಿಜಯಪುರ: ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ತರಕಾರಿ, ಸೊಪ್ಪು ಮಾರಾಟ ಮಾಡಲು ಅವಕಾಶವಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಅಥಣಿ ರಸ್ತೆಬಳಿ ಮಾರುಕಟ್ಟೆಯಲ್ಲಿ ಸೊಪ್ಪು ಮಾರಲು ನಿಂತಿದ್ದ ರೈತನಿಗೆ ಅಡ್ಡಿಪಡಿಸಿದಕ್ಕೆ ಸಿಡಿದೆದ್ದ ರೈತ, ಪೊಲೀಸರ ವಿರುದ್ಧ ಕಿಡಿಕಾರಿದ್ದಾನೆ. ಸೊಪ್ಪುಗಳನ್ನು ರಸ್ತೆಗೆ ಬಿಸಾಕಿ ಈ ರೀತಿ ಮಾಡಿದರೆ ರೈತರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾನೆ.
ಡೋಮನಾಳ ಗ್ರಾಮದ ಭೀಮನಗೌಡ ಬಿರಾದಾರ್ ಎಂಬ ರೈತ ಅಥಣಿ ರಸ್ತೆ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ಮೆಂತ್ಯ, ಸಬ್ಬಸ್ಗಿ, ಕೊತ್ತಂಬರಿ ಸೊಪ್ಪು ಮಾರಲು ಕುಳಿತಿದ್ದ. ವೀಕೆಂಡ್ ಕರ್ಫ್ಯೂ ಎಂದು ಪೊಲೀಸರು ತರಕಾರಿ-ಸೊಪ್ಪು ಮಾರುವವರನ್ನು ವಾಪಸ್ ಕಳುಹಿಸಿದ್ದಾರೆ. ಅಂತರ ಕಾಯ್ದುಕೊಂಡು ಸೊಪ್ಪು ಮಾರಾಟ ಮಾಡುವುದಾಗಿ ರೈತ ಮನವಿ ಮಾಡಿದರೂ ಪೊಲೀಸರು ಅವಕಾಶ ನೀಡಿಲ್ಲ. ಇದರಿಂದ ಬೇಸತ್ತ ರೈತ ರಸ್ತೆಯ ಮೇಲೆ ಸೊಪ್ಪುಗಳನ್ನು ಬಿಸಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಅಗತ್ಯ ವಸ್ತುಗಳನ್ನು ಮಾರಲು ಸರ್ಕಾರ ಅನುಮತಿ ನೀಡಿದರೂ ಪೊಲೀಸರು ನಮ್ಮಂತಹ ಸಣ್ಣಪುಟ್ಟ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ತರಕಾರಿ, ಸೊಪ್ಪು ಮಾರಲು ಬಿಡುತ್ತಿಲ್ಲ. ಸಾಲ ಸೂಲ ಮಾಡಿ ಸೊಪ್ಪು, ತರಕಾರಿ ಬೆಳೆದಿದ್ದೇವೆ. ಈಗ ಮಾರಾಟ ಮಾಡಲೂ ಪೊಲಿಸರು ಅಡ್ಡಿ ಪಡಿಸಿದರೆ ನಾವು ಬದುಕುವುದಾದರೂ ಹೇಗೆ? ದೊಡ್ಡ ದೊಡ್ಡ ಅಂಗಡಿಗಳು ದಿನವಿಡಿ ಬಾಗಿಲು ತೆಗೆದಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮಂತ ಸಣ್ಣ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.