ಓಮಿಕ್ರಾನ್ ಸೋಂಕಿನ ಹೊಸ ಅಲೆಯು ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಆದರೆ ದಕ್ಷಿಣ ಆಫ್ರಿಕಾದ ಅಧ್ಯಯನವೊಂದು, ಓಮಿಕ್ರಾನ್ ರೂಪಾಂತರಿ ವೈರಾಣು ಲಸಿಕೆ ಹಾಕಿಸಿಕೊಳ್ಳದ ಜನರಿಗೂ ಸಹ ಕಡಿಮೆ ಹಾನಿಕಾರಕವಾಗಿದೆ ಎಂದು ಹೇಳಿದೆ.
ಹಿಂದಿನ ಕೋವಿಡ್ ಸ್ಟ್ರೈನ್‌ಗಳಿಗೆ ಹೋಲಿಸಿದರೆ ಓಮಿಕ್ರಾನ್ ಸೋಂಕಿಗೆ ಒಳಗಾದ ಲಸಿಕೆ-ಪಡೆಯದ ಜನರು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ, ಆಸ್ಪತ್ರೆಗೆ ದಾಖಲಾಗುವ ಅಥವಾ ಸಾಯುವ ಸಾಧ್ಯತೆಯೂ ಕಡಿಮೆ ಎಂದು ಇನ್ನೂ ಮರುವಿಶ್ಲೇಷಣೆ ಮಾಡಬೇಕಾಗಿರುವ ಅಧ್ಯಯನ ಹೇಳಿದೆ.
ಹಿಂದಿನ ಕೋವಿಡ್ ಅಲೆಗಳಿಗೆ ಹೋಲಿಸಿದರೆ ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಅಲೆಯ ಸಮಯದಲ್ಲಿ ಸಾವಿನ ಸಾಧ್ಯತೆಗಳು ಗಣನೀಯವಾಗಿ ಕಡಿಮೆಯಾಗಿದೆ ಎಂದು ಇಲ್ಲಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕಬಲ್ ಡಿಸೀಸ್ (ಎನ್‌ಐಸಿಡಿ) ನೇತೃತ್ವದ ಅಧ್ಯಯನ ಹೇಳಿದೆ.
ಅಧ್ಯಯನದ ಉದ್ದೇಶಕ್ಕಾಗಿ; ಸಂಶೋಧಕರು ಕೋವಿಡ್-19 ಸೋಂಕಿನ ಮೊದಲ ಮೂರು ಅಲೆಗಳ ಸಂತ್ರಸ್ತರಾದ 11,609 ರೋಗಿಗಳನ್ನು ಹೊಸ ಓಮಿಕ್ರಾನ್ ಅಲೆಗೆ ಸಿಲುಕಿದ 5,144 ರೋಗಿಗಳೊಂದಿಗೆ ಹೋಲಿಸಿದ್ದಾರೆ.
ಕೋವಿಡ್‌ನ ಮೊದಲ ಅಲೆಗಳಲ್ಲಿ, ಆಸ್ಪತ್ರೆಗೆ ದಾಖಲಾದ ಮೊದಲ 14 ದಿನಗಳ ಅವಧಿಯಲ್ಲಿ ಪಾಸಿಟಿವ್ ಕಂಡು ಬಂದವರ ಪೈಕಿ ಸಾವುಗಳ ಪ್ರಮಾಣ 16.5 ಇದ್ದರೆ, ಓಮಿಕ್ರಾನ್ ಕಾಟದ ವೇಳೆ, ಮೊದಲ 14 ದಿನಗಳಲ್ಲಿ ಕೇವಲ ಎಂಟು ಪ್ರತಿಶತದಷ್ಟು ರೋಗಿಗಳು ಮೃತಪಟ್ಟಿದ್ದಾರೆ, ಅಥವಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.