ನವದೆಹಲಿ: ಮೃತಪಟ್ಟ ವ್ಯಕ್ತಿ ಹೆಲ್ಪಟ್ ಎಂದು ವಿಮೆ ರಕ್ಷಣೆಯಿಂದ ವಂಚಿಸುವಂತಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ. ವಿಮೆ ಪಾಲಿಸಿಯ ಪ್ರಕಾರ ಚಾಲಕ ಮತ್ತು ಕ್ಲೀನರ್ ಮಾತ್ರ ಪರಿಹಾರ ವ್ಯಾಪ್ತಿಗೆ ಒಳಪಡುತ್ತಾರೆ ಎನ್ನುವ ಕಾರಣವೊಡ್ಡಿ ವಿಮೆ ಪರಿಹಾರ ನೀಡಲು ನಿರಾಕರಿಸಿದ್ದ ಕಂಪನಿಯ ಪರ ರಾಜಸ್ಥಾನ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಹೆಲ್ಪರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ವಿಮೆ ರಕ್ಷಣೆ ನಿರಾಕರಿಸಿದ ರಾಜಸ್ಥಾನ ಹೈಕೋರ್ಟ್ ತೀರ್ಪು ನ್ಯಾಯಸಮ್ಮತವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಸಹಾಯಕ ಅಥವಾ ಹೆಲ್ಪರ್ ಮತ್ತು ಕ್ಲೀನರ್ ಗಳ ಕರ್ತವ್ಯ ಬಹುತೇಕ ಒಂದೇ ರೀತಿ ಇರುತ್ತದೆ. ಕೆಲಸ ನೀಡುವ ವ್ಯಕ್ತಿ ಅಥವಾ ಸಂಸ್ಥೆಯು ಅವರ ಕೆಲಸಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಪರಿಶೀಲನೆಯ ಸಂದರ್ಭದಲ್ಲಿ ಮೃತಪಟ್ಟ ತೇಜ್ ಸಿಂಗ್ ಕ್ಲೀನರ್ ಮತ್ತು ಹೆಲ್ಪರ್ ಆಗಿದ್ದರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹೀಗಾಗಿ ವಿಮೆ ವ್ಯಾಪ್ತಿಗೆ ಹೆಲ್ಪರ್ ಬರುವುದಿಲ್ಲ ಎನ್ನುವುದನ್ನು ಒಪ್ಪಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ. ರಾಮಸುಬ್ರಮಣಿಯನ್ ಅವರ ಪೀಠವು ಹೆಲ್ಪರ್ ಮತ್ತು ಕ್ಲೀನರ್ ಕೆಲಸಗಳ ಬಗ್ಗೆ ಸ್ಪಷ್ಟವಾದ ಗಡಿರೇಖೆಗಳಿಲ್ಲ ಎಂದು ತಿಳಿಸಿದೆ.
ಬೋರ್ವೆಲ್ ಕೊರೆಯುವ ವಾಹನದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತೇಜ್ ಸಿಂಗ್ ಭೂಕುಸಿತವುಂಟಾಗಿ ಮೃತಪಟ್ಟಿದ್ದರು. ಕಾರ್ಮಿಕ ಇಲಾಖೆಯಿಂದ 3.27 ಲಕ್ಷ ರೂಪಾಯಿ ಪರಿಹಾರ ಮತ್ತು 2500 ರೂ. ಅಂತ್ಯಸಂಸ್ಕಾರ ವೆಚ್ಚ ನೀಡಲು ವಿಮಾ ಕಂಪನಿಗೆ ಆದೇಶಿಸಲಾಗಿತ್ತು. ಅಪಘಾತದ ದಿನದಿಂದ ವಾರ್ಷಿಕ ಶೇಕಡ 18 ರ ಬಡ್ಡಿಯನ್ನು ಕೂಡ ಪರಿಹಾರ ಮೊತ್ತದ ಮೇಲೆ ನೀಡುವಂತೆ ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿ ವಿಮೆ ಕಂಪನಿ ಹೈಕೋರ್ಟ್ ಮೆಟ್ಟಿಲೇರಿದ್ದು ರಾಜಸ್ಥಾನ ಹೈಕೋರ್ಟ್ ಲೋಡಿಂಗ್ ಮತ್ತು ಅನ್ ಲೋಡಿಂಗ್ ಮಾಡುವ ವ್ಯಕ್ತಿಯನ್ನು ಹೆಲ್ಪರ್ ಎಂದು ಹೇಳಬಹುದು ಎಂದಿತ್ತು. ಕಂಪನಿ ವಿಮೆ ಕ್ಲೀನರ್ ಗೆ ಮಾತ್ರವೇ ಹೆಲ್ಪರ್ ಗೆ ಅಲ್ಲವೆಂದು ತಿಳಿಸಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.