ಬೆಂಗಳೂರು : ಪತ್ನಿ ಹಾಗೂ ಎಲ್ ಐ ಸಿ ಏಜೆಂಟ್ ನೀಡಿದ ಮಾನಸಿಕ ಕಿರುಕುಳಕ್ಕೆ ಮನನೊಂದ ವ್ಯಕ್ತಿಯೊಬ್ಬರು ತನ್ನ 6 ವರ್ಷದ ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ನಾಗಮಂಗಲ ತಾಲೂಕಿನ ಪಿಟ್ಟೆಕೊಪ್ಪಲು ಗ್ರಾಮದ ಗಂಗಾಧರಗೌಡ(36) ಎಂಬುವವರೇ 6 ವರ್ಷದ ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ನಮ್ಮ ಸಾವಿಗೆ ಪತ್ನಿ ಸಿಂಧು ಹಾಗೂ ಎಲ್ ಐ ಸಿ ಏಜೆಂಟ್ ಜಿ.ಸಿ. ನಂಜುಂಡೇಗೌಡ ಎಂಬುವವರೇ ಕಾರಣ. ಅವರಿಂದಾಗಿಯೇ ನಾನು ಈ ನಿರ್ಧಾರ ಕೈಗೊಂಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವರ ಪತ್ನಿ ಹಾಗೂ ಎಲ್ ಐ ಸಿ ಏಜೆಂಟ್ ಮಧ್ಯೆ ಹಲವು ವರ್ಷಗಳಿಂದ ಅನೈತಿಕ ಸಂಬಂಧವಿತ್ತು ಎನ್ನಲಾಗಿದ್ದು, ಈ ಕುರಿತು ಹಲವು ಬಾರಿ ಪತಿ ಬುದ್ಧಿ ಹೇಳಿ, ನಾಲ್ಕಾರು ಜನ ಹಿರಿಯರಿಂದ ಬುದ್ಧಿ ಹೇಳಿಸಿ, ರಾಜಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಮನನೊಂದು ಪತಿ ತನ್ನ ಮಗನೊಂದಿಗೆ ಕೆರೆಗೆ ಹಾರಿದ್ದಾರೆ.
ಆತ್ಮಹತ್ಯೆಗೆ ಪತಿ ಹಾಗೂ ಅವಳ ಸ್ನೇಹಿತನೇ ಕಾರಣ ಎಂದು ಮೃತನ ಸಹೋದರ ಬಿ.ಪಿ.ಮಂಜುನಾಥ ದೂರು ನೀಡಿದ್ದಾರೆ. ಮೃತ ದೇಹಗಳನ್ನು ಕೆರೆಯಿಂದ ಹೊರ ತೆಗೆಯುತ್ತಿದ್ದ ಸಂದರ್ಭದಲ್ಲಿ ಪತ್ನಿ ಸಿಂಧು ಕೂಡ ಕೆರೆಗೆ ಹಾರಿದ್ದಾರೆ. ಸ್ಥಳದಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.
ಸದ್ಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.