ನವದೆಹಲಿ : ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಡೀ ದೇಶವೇ ಮತ್ತೊಮ್ಮೆ ಪರಿತಪಿಸುತ್ತಿದೆ. ಅದರಲ್ಲಿಯೂ ದೆಹಲಿಯಲ್ಲಿ ಸೋಂಕಿನ ಹಾವಳಿ ಹೆಚ್ಚಾಗಿದ್ದು, ಅಲ್ಲಿ ಕಳೆದ 24 ಗಂಟೆಗಳಲ್ಲಿ 28,867 ಕೋವಿಡ್ ಪ್ರಕರಣಗಳು ವರದಿಯಾಗಿತ್ತು. ಇಂದು ಸೋಂಕಿತರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೂ ಅಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಕಳವಳ ಮೂಡಿಸುತ್ತಿದೆ.
ಇಲ್ಲಿಯವರೆಗೂ ಸೋಂಕಿತರ ಪೈಕಿ ಸುಮಾರು ಶೇ.10ರಷ್ಟು ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ.30ಕ್ಕೆ ಏರಿಕೆ ಕಂಡಿದೆ.
ಹೀಗಾಗಿ ದೆಹಲಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಬೆಡ್ ಗಳ ಸಮಸ್ಯೆ ತಲೆದೋರಬಹುದು ಎನ್ನಲಾಗುತ್ತಿದ್ದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮುಂಜಾಗೃತಾ ಕ್ರಮವಾಗಿ ಕೊರೊನಾ ಮೂರನೇ ಅಲೆಗೂ ಮುನ್ನವೇ ಬೆಡ್ ಗಳ ವಿಷಯದಲ್ಲಿ ತೀವ್ರ ನಿಗಾ ವಹಿಸಿದ್ದರು.
ಸದ್ಯದ ಅಂಕಿ- ಸಂಖ್ಯೆಗಳನ್ನು ಗಮನಿಸಿದರೆ, ಅಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದ್ದು, ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಮುಂದಾಗುವಂತೆ ಸಿಎಂ ಸೂಚನೆ ನೀಡಿದ್ದಾರೆ.