ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಶಾಸಕ ಯತ್ನಾಳ್ ಹೇಳಿಕೆ ಸರಿಯಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ರಾಜಕೀಯ ಕಾರ್ಯದರ್ಶಿ ಸ್ಥಾನ ಏನೂ ನನಗೆ ದೊಡ್ಡದಲ್ಲ, ಸುಮ್ಮನೆ ಮನೆ ಕೊಟ್ಟಿದ್ದಾರೆ, ಚೇಂಬರ್ ಕೊಟ್ಟಿದ್ದಾರೆ. ರಾಜಕೀಯ ಕಾರ್ಯದರ್ಶಿ ಸ್ಥಾನದಲ್ಲಿ ಬಹಳ ಕೆಲಸವೇನೂ ಇಲ್ಲ. ಅದಕ್ಕೆ ನಾನೇನು ಅಂಟಿಕೊಂಡೂ ಕುಳಿತಿಲ್ಲ ಎಂದು ಹೇಳಿದ್ದಾರೆ.
ಸಂಪುಟ ಪುನರಚನೆಯಾಗಬೇಕು. ಅರ್ಹರಿಗೆ ಸ್ಥಾನ ಸಿಗಬೇಕು ಎಂಬ ಯತ್ನಾಳ್ ಹೇಳಿಕೆ ಸರಿಯಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಹೊರತುಪಡಿಸಿ ಕೆಲವರ ಬದಲಾವಣೆಯಾಗಬೇಕು. ಅದೇ ಮುಖ ನೋಡಿ ನೋಡಿ ಜನರಿಗೆ ಸಾಕಾಗಿದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಮೇಕೆದಾಟು ಪಾದಯಾತ್ರೆ ಮಾಡಲು ಸ್ವತಃ ಸಿದ್ದರಾಮಯ್ಯನವರಿಗೆ ಇಷ್ಟವಿರಲಿಲ್ಲ. ಕೋವಿಡ್ ನಿಯಮ ಉಲ್ಲಂಘನೆಯಡಿ ಕೇಸ್ ಹಾಕುತ್ತಾರೆ ಎಂಬುದು ಗೊತ್ತಿತ್ತು. ಡಿ.ಕೆ. ಶಿವಕುಮಾರ್ ಪಾದಯಾತ್ರೆ ಘೋಷಿಸಿದ್ದರಿಂದ ಹೋಗಿದ್ದಾರೆ ಅಷ್ಟೆ. ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಅವರ ಪಟಾಲಂಗಳು ಕೂಗುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಿ ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗಿ ಬಿಡುತ್ತಾರೋ ಎಂಬ ಕಾರಣಕ್ಕೆ ಅಧಿಕಾರದ ಕಿತ್ತಾಟಕ್ಕಾಗಿ ಡಿಕೆಶಿ ಮೇಕೆದಾಟು ಪಾದಯಾತ್ರೆ ಘೋಷಿಸಿದರು. ಕಾಂಗ್ರೆಸ್ ನಾಯಕರಿಗೆ ಹೋರಾಟ ಎಂದರೇನು ಎಂದೇ ಗೊತ್ತಿಲ್ಲ ಎಂದು ಕಿಡಿಕಾರಿದರು.