
ಬೆಂಗಳೂರು: ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕಾಂಗ್ರೆಸ್ ನಾಯಕರು ನಡೆಸಿದ್ದ ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿ ವಿಚಾರಣೆ ಇತ್ಯರ್ಥಗೊಂಡಿದೆ.
ಕೋರ್ಟ್ ಸೂಚನೆಯಂತೆ ಪ್ರಸ್ತುತ ಮೇಕೆದಾಟು ಪಾದಯಾತ್ರೆ ಮುಂದೂಡಲಾಗಿದೆ ಎಂದು ಕೆಪಿಸಿಸಿ ಪರ ಹಿರಿಯ ವಕೀಲ ಉದಯ್ ಹೊಳ್ಳ ಮಾಹಿತಿ ನೀಡಿದ್ದಾರೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾದಯಾತ್ರೆಯನ್ನು ಸ್ಥಗಿತಗೊಳಿಸಿದೆ. ಆದರೆ ಬೇರೆ ಪಕ್ಷಗಳ ಪಾದಯಾತ್ರೆ ನಡೆಯುತ್ತಿದೆ. ಸರ್ಕಾರದ ತಾರತಮ್ಯ ಧೋರಣೆಯನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಸಿಜೆ ರಿತುರಾಜ್ ಅವಸ್ತಿ, ಎಲ್ಲಾ ರಾಜಕೀಯ ಪಕ್ಷಗಳಿಗೂ ಎಸ್ ಒ ಪಿ ಅನ್ವಯವಾಗುತ್ತದೆ. ಯಾವ ರಾಜಕೀಯ ಪಕ್ಷಗಳೂ ನಿಯಮ ಮೀರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊರೊನಾದಂತಹ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆ, ಧರಣಿ, ಮೆರವಣಿಗೆಗಳಿಗೂ ಅವಕಾಶ ನೀಡುವಂತಿಲ್ಲ. ಎಸ್ ಒ ಪಿ ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ. ಇದೇ ವೇಳೆ ಮೇಕೆದಾಟು ಕುರಿತ ಪಿಐಎಲ್ ಇತ್ಯರ್ಥಗೊಳಿಸಿದೆ.