ಇಂದಿನಿಂದ 19 ವರ್ಷದೊಳಗಿನ ಕಿರಿಯರ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಭಾರತ ತಂಡ ಕಣಕ್ಕೆ ಇಳಿಯಲು ಸಜ್ಜಾಗಿದೆ.
ಇತ್ತೀಚೆಗಷ್ಟೇ ನಡೆದಿದ್ದ ಅಂಡರ್-19 ಏಷ್ಯಾಕಪ್ ನಲ್ಲಿ ಭರ್ಜರಿ ಪ್ರದರ್ಶನ ತೋರಿ ಪ್ರಶಸ್ತಿ ಗೆದ್ದಿರುವ ಭಾರತ ತಂಡ, ಅದೇ ವಿಶ್ವಾಸದಲ್ಲಿ ವಿಶ್ವಕಪ್ ಗೆಲ್ಲುವ ತವಕದಲ್ಲಿದೆ.
ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು ವೆಸ್ಟ್ಇಂಡೀಸ್ ಆತಿಥ್ಯ ವಹಿಸುತ್ತಿದೆ. ಈ ಟೂರ್ನಿಯಲ್ಲಿ 16 ತಂಡಗಳು ಪ್ರಶಸ್ತಿಗಾಗಿ ಸೆಣಸುತ್ತಿವೆ. ಉದ್ಘಾಟನಾ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಟ ನಡೆಸಲಿವೆ. ಮತ್ತೊಂದು ಪಂದ್ಯದಲ್ಲಿ ಸ್ಕಾಟ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಪೈಪೋಟಿ ನಡೆಸಲಿವೆ.
ಈ ಟೂರ್ನಿಯಲ್ಲಿ ಭಾರತ ತಂಡದ ಸಾಧನೆ ಅಮೋಘವಾಗಿದ್ದು, 4 ಬಾರಿ ವಿಶ್ವಕಪ್ ಗೆದ್ದಿದೆ. ಅಲ್ಲದೇ, 3 ಬಾರಿ ಕೂಡ ಫೈನಲ್ ಪ್ರವೇಶಿಸಿ ಸೋಲು ಕಂಡಿದೆ. ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತೀಯ ತಂಡದ ಅಭಿಯಾನ ಜ. 15ರಿಂದ ಆರಂಭವಾಗಲಿದ್ದು, ದಕ್ಷಿಣ ಆಫ್ರಿಕಾ ತಂಡದೊಂದಿಗೆ ಸೆಣಸಾಟ ನಡೆಸಲಿದೆ. ಆನಂತರ ಜ. 19ರಂದು ಐರ್ಲೆಂಡ್, ಜ. 22ಕ್ಕೆ ಉಗಾಂಡ ವಿರುದ್ಧ ತನ್ನ ಹೋರಾಟ ನಡೆಸಲಿದೆ.
ಫೆ. 5ಕ್ಕೆ ಈ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ. ಅಲ್ಲದೇ, ಈ ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು, ಕಪ್ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಭಾರತವೇ ಟಾಪ್ ನಲ್ಲಿದೆ.