ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 370 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಂಕಿತರಲ್ಲಿ 60 ಅಧಿಕಾರಿಗಳು ಮತ್ತು 310 ಕಾನ್ ಸ್ಟೇಬಲ್ಗಳು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸ್ತುತ, ಮಹಾರಾಷ್ಟ್ರ ರಾಜ್ಯದಾದ್ಯಂತ ಒಟ್ಟು 504 ಅಧಿಕಾರಿಗಳು ಮತ್ತು 1,678 ಕಾನ್ ಸ್ಟೇಬಲ್ ಗಳು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ 2182 ಪೊಲೀಸರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಮಹಾರಾಷ್ಟ್ರ ಪೊಲೀಸ್ ನ ಒಟ್ಟು 48,611 ಸಿಬ್ಬಂದಿ (6,204 ಅಧಿಕಾರಿಗಳು ಮತ್ತು 42,407 ಕಾನ್ ಸ್ಟೇಬಲ್ ಗಳು) ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಕೋವಿಡ್ ನಿಂದಾಗಿ 46 ಅಧಿಕಾರಿಗಳು ಮತ್ತು 458 ಕಾನ್ ಸ್ಟೇಬಲ್ ಗಳು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರ ಮಾತ್ರವಲ್ಲ ದೆಹಲಿ, ಕರ್ನಾಟಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸ್ ಪಡೆ ಕೊರೋನಾಗೆ ಸೋತು ಸೋಂಕಿಗೆ ಒಳಗಾಗುತ್ತಿದೆ. ನೆನ್ನೆ ಒಂದೇ ದಿನ ಬೆಂಗಳೂರಿನಲ್ಲಿ 67 ಪೊಲೀಸರಲ್ಲಿ ಸೋಂಕು ಪತ್ತೆಯಾಗಿದೆ. ದೆಹಲಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ 1700 ಪೊಲೀಸರು ಕೊರೋನಾಗೆ ತುತ್ತಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಬುಧವಾರ 46,723 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ, ಇದು ಹಿಂದಿನ ದಿನಕ್ಕಿಂತ ಶೇಕಡಾ 27 ಕ್ಕಿಂತ ಹೆಚ್ಚಾಗಿದೆ. ಈ ಪೈಕಿ ಮುಂಬೈನಲ್ಲಿ 16,420 ಹೊಸ ಪ್ರಕರಣಗಳು ವರದಿಯಾಗಿವೆ.