ಬೆಂಗಳೂರು: ಕೊರೊನಾದಂತಹ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಹೈಕೋರ್ಟ್ ನಿಂದ ನೋಟಿಸ್ ನೀಡಲಾಗಿದ್ದರೂ ಪಾದಯಾತ್ರೆ ಮುಂದುವರೆಸುವ ಉದ್ಧಟತನ ಸರಿಯಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವರು, ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದೆ. ಜಿಲ್ಲೆ ಜಿಲ್ಲೆಗಳಿಂದ ಜನರನ್ನು ಕರೆಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆ ಜತೆ ಜತೆಗೆ ಕೋವಿಡ್ ಹರಡುವ ಯಾತ್ರೆಯಾಗುತ್ತಿದೆ. ಈಗಾಗಲೇ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕರಾದ ವೀರಪ್ಪ ಮೊಯ್ಲಿ, ಹೆಚ್.ಎಂ.ರೇವಣ್ಣ, ಮುಲ್ಲಜಮ್ಮ ಸೇರಿ ಹಲವರಿಗೆ ಕೊರೊನಾ ಸೋಂಕು ತಗುಲಿದೆ. ಪಾದಯಾತ್ರೆಯಲ್ಲಿ ಇನ್ನು ಅದೆಷ್ಟು ಜನರಿಗೆ ಸೋಂಕು ಹರಡಿರಬಹುದು? ಹೀಗಾಗಿ ಪಾದಯಾತ್ರೆ ತಕ್ಷಣ ನಿಲ್ಲಿಸಬೇಕು ಎಂದರು.
ಡಿ.ಕೆ.ಶಿವಕುಮಾರ್ ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಹಾಗಾಗಿ ಕಾಂಗ್ರೆಸ್ ನಾಯಕರು ಅವರಾಗಿಯೇ ಪಾದಯಾತ್ರೆ ನಿಲ್ಲಿಸಬಹುದು. ನಿಲ್ಲಿಸದಿದ್ದರೆ ಕಾನೂನು ಪ್ರಕಾರ ಪಾದಯಾತ್ರೆಯನ್ನು ಹೇಗೆ ನಿರ್ಬಂಧಿಸಬೇಕು ಹಾಗೆ ಮಾಡುತ್ತೇವೆ. ಒಂದು ಹೆಜ್ಜೆ ಮುಂದೆ ಹೋಗಲು ಬಿಡಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ, ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.