ಜನವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಭೇಟಿ ವೇಳೆ ಪ್ರತಿಭಟನಾನಿರತ ರೈತರು ಏಕಾಏಕಿ ರಸ್ತೆಗೆ ಅಡ್ಡಬಂದು, 20 ನಿಮಿಷಗಳ ಕಾಲ ಪ್ರಧಾನಿ ಸೇರಿದಂತೆ ಬೆಂಗಾವಲು ಪಡೆ ವಾಹನ ಸ್ತಬ್ಧವಾಗಿರುವಂತೆ ಆಗಿತ್ತು. ಬಳಿಕ ಕೂಡ ರೈತರು ಚದುರದ ಕಾರಣ ಪ್ರಧಾನಿ ಹಿಂದಿರುಗಿದ್ದರು.
ಈ ಭದ್ರತಾ ಲೋಪದ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ತನಿಖೆಗೆ ಆದೇಶಿಸಿದ್ದು, ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೊತ್ರಾ ಅವರಿಗೆ ತನಿಖಾ ಸಮಿತಿಯ ಸಾರಥ್ಯ ವಹಿಸಿದೆ. ಒಟ್ಟು ಐದು ಮಂದಿ ಉನ್ನತ ಮಟ್ಟದ ಅಧಿಕಾರಿಗಳನ್ನು ಸಮಿತಿಗೆ ನೇಮಕ ಮಾಡಲಾಗಿದೆ. ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಐಜಿ, ಚಂಡೀಗಢದ ಡಿಜಿಪಿ, ಪಂಜಾಬ್ ಹಾಗೂ ಹರಿಯಾಣ ಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಮತ್ತು ಪಂಜಾಬ್ ಪೊಲೀಸ್ ಭದ್ರತಾ ಎಡಿಜಿಪಿ ತನಿಖೆಯ ಹೊಣೆ ಹೊತ್ತಿದ್ದಾರೆ.
ಮುಂದಿನ ಮೇನಲ್ಲಿ ನಡೆಯಲಿದೆ NDAಗೆ ಮಹಿಳೆಯರ ಪ್ರವೇಶ
ಇದರ ನಡುವೆಯೇ ಕೇಂದ್ರ ಸರಕಾರ ಮತ್ತು ಪಂಜಾಬ್ ಸರಕಾರ ಶುರು ಮಾಡಿದ್ದ ತನಿಖೆಗಳಿಗೆ ಕೋರ್ಟ್ ಬ್ರೇಕ್ ಹಾಕಿದೆ. ಬಹುಚರ್ಚಿತ ಮತ್ತು ಮಹತ್ವದ ತನಿಖೆ ನಿಭಾಯಿಸಲಿರುವ ನಿವೃತ್ತ ನ್ಯಾ. ಇಂದು ಅವರ ಕಿರು ಪರಿಚಯ ಇಲ್ಲಿದೆ.
2018ರಲ್ಲಿ ಸುಪ್ರೀಂಕೋರ್ಟ್ಗೆ ನೇರವಾಗಿ ನೇಮಕಗೊಂಡ ಮೊದಲ ಮಹಿಳಾ ನ್ಯಾಯಾಧೀಶೆ ಎಂಬ ಖ್ಯಾತಿ ಅವರದ್ದು. ಸ್ವಾತಂತ್ರ್ಯ ಬಳಿಕ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಿದ 7ನೇ ಮಹಿಳಾ ನ್ಯಾಯಮೂರ್ತಿ ಇವರು. ಜತೆಗೆ ಸುಪ್ರೀಂಕೋರ್ಟ್ನ ವಿಶೇಷ ವೀಕ್ಷಕರಿಂದ ಹಿರಿಯ ವಕೀಲೆ ಎಂದು ನಾಮನಿರ್ದೇಶನ ಪಡೆದ ಶ್ರೇಯ ಕೂಡ ಇವರದ್ದು. 1977ರಲ್ಲಿ ಲೀಲಾ ಶೇಟ್ ಅವರು ಮೊದಲ ಹಿರಿಯ ವಕೀಲೆ ಎನಿಸಿದ್ದರು.
2021ರ ಮಾ.13ರಂದು ಇಂದು ಅವರು ನಿವೃತ್ತರಾದರು. ಅದಕ್ಕೂ ಮುನ್ನ ಇಂದು ಅವರು, ಕೇರಳ ಶಬರಿಮಲೆ ದೇವಸ್ಥಾನಕ್ಕೆ ಋುತುಮತಿ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷಿದ್ಧ ಪ್ರಕರಣದಲ್ಲಿ ದೀರ್ಘ ವಾದದ ನಂತರ ನೀಡಲಾದ ತೀರ್ಪಿನ ಭಾಗವಾಗಿದ್ದರು.
10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶ ನೀಡುವ ಸುಪ್ರೀಂ ಕೋರ್ಟ್ ಅದೇಶದಲ್ಲಿ ಇವರು ವಿರುದ್ದದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ದೇವಸ್ಥಾನಗಳ ಪ್ರಾಚೀನ ಮತ್ತು ಖಾಸಗಿ ಪದ್ಧತಿಗಳಲ್ಲಿ ನ್ಯಾಯಾಲಯ ಒಮ್ಮೆ ಪ್ರವೇಶ ಮಾಡಿದರೆ, ಅಂಥದ್ದೇ ಹಲವು ಪ್ರಕರಣಗಳು ಕೋರ್ಟ್ಗೆ ಬರಲಿವೆ. ಸಾರ್ವಜನಿಕರ ಶ್ರದ್ಧಾ -ಭಕ್ತಿ ಕೇಂದ್ರದ ನಿಯಮಗಳನ್ನು ಜನರೇ ಸುಧಾರಣೆ ಮಾಡಿಕೊಳ್ಳಲಿ ಎಂದು ಮಹತ್ವದ ಸಲಹೆ ಕೊಟ್ಟಿದ್ದರು.
2019ರಲ್ಲಿ ಅಂದಿನ ಸಿಜೆಐ ರಂಜನ್ ಗೊಗೊಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ವಿರುದ್ಧ ತನಿಖೆ ನಡೆಸಿದ ಕ್ಲೀನ್ಚಿಟ್ ನೀಡಿದ್ದ ತ್ರಿಸದಸ್ಯ ಸಮಿತಿಯಲ್ಲಿ ನ್ಯಾ. ಇಂದು ಅವರಿದ್ದರು.