ರಾಮನಗರ: ಮೇಕೆದಾಟು ಯೋಜನೆಗೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಕೈಗೊಂಡ ಪಾದಯಾತ್ರೆ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ.
ರಾಮನಗರದಿಂದ ಇಂದು ಪಾದಯಾತ್ರೆ ಆರಂಭವಾಗಲಿದೆ. ಬಿಡದಿಯವರೆಗೆ 13 ಕಿಲೋಮೀಟರ್ ಪಾದಯಾತ್ರೆ ಸಾಗಲಿದೆ. ನಿನ್ನೆ ರಾಮನಗರದಲ್ಲಿ ನಾಲ್ಕನೇ ದಿನದ ಪಾದಯಾತ್ರೆ ಅಂತ್ಯಗೊಂಡಿದ್ದು, ಇಂದು 5 ನೇ ದಿನದ ಪಾದಯಾತ್ರೆ ಮುಂದುವರೆಯಲಿದೆ. ಕಾಂಗ್ರೆಸ್ ಪಾದಯಾತ್ರೆ ತಡೆಯಲು ಪೊಲೀಸರು ಸಿದ್ಧತೆ ಕೈಗೊಂಡಿದ್ದು, ಪಾದಯಾತ್ರೆಯನ್ನು ನಡೆಸದಂತೆ ಪ್ಲಾನ್ ರೂಪಿಸಲಾಗಿದೆ. ಬೇರೆ ಜಿಲ್ಲೆಗಳಿಂದ ಬರುವವರಿಗೆ ರಾಮನಗರ ಜಿಲ್ಲಾ ಗಡಿಭಾಗದಲ್ಲಿ ತಡೆಯಲು ಬ್ಯಾರಿಕೇಡ್ ಹಾಕಲಾಗಿದೆ. ಪಾದಯಾತ್ರೆ ನಡೆಸಿದರೆ ಕಾಂಗ್ರೆಸ್ ನಾಯಕರ ಬಂಧನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
144 ಸೆಕ್ಷನ್ ಜಾರಿ ಮಾಡಿದರೂ, ಕಾಂಗ್ರೆಸ್ ನಾಯಕರು ಪಾದಯಾತ್ರೆ ಕೈಗೊಂಡಿದ್ದು, ರಾಮನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪಾದಯಾತ್ರೆಗೆ ಬ್ರೇಕ್ ಹಾಕಲು ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದ್ದು, ರಾಮನಗರ ಪೊಲೀಸ್ ಭದ್ರಕೋಟೆಯಾಗಿ ಮಾರ್ಪಟ್ಟಿದೆ.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಕೈಗೊಂಡಿರುವ ಪಾದಯಾತ್ರೆ ಇಂದು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗಲಿದ್ದು, ಪಾದಯಾತ್ರೆಯ ವೇಳೆ ವಾಹನ ಸಂಚಾರವನ್ನು ಸ್ಥಗಿತಗೊಳಿಸುವುದಿಲ್ಲ. ಎಂದಿನಂತೆಯೇ ವಾಹನ ಸಂಚಾರ ಮುಂದುವರೆಸಲು ರಾಮನಗರ ಪೊಲೀಸ್ ಇಲಾಖೆಗೆ ಸರ್ಕಾರದಿಂದ ಸೂಚನೆ ನೀಡಲಾಗಿದೆ ಎನ್ನಲಾಗಿದೆ.