ಸೌದಿ ಅರೇಬಿಯಾ ರಾಜಧಾನಿ, ರಿಯಾದ್ ನಲ್ಲಿ ಒಂಟೆಗಳ ಫ್ಯಾಷನ್ ಶೋ ನಡೆಯುತ್ತದೆ. ಅದ್ರಲ್ಲಿ ಅತ್ಯಂತ ಸುಂದರ ಒಂಟೆ ಗೆಲ್ಲುತ್ತದೆ. ಈ ಕಾರ್ಯಕ್ರಮವನ್ನ ಒಂದು ರೀತಿಯ ಗ್ಯಾಂಬ್ಲಿಂಗ್ ಅಂದರು ತಪ್ಪಿಲ್ಲ, ಇಲ್ಲಿ ಹಣದ ಹೊಳೆಯೆ ಹರಿಯುತ್ತದೆ. ಆದರೆ ಈವರೆಗೂ ಈ ಕಾರ್ಯಕ್ರಮಕ್ಕೆ ಬರುವ ಒಂಟೆಗಳನ್ನ ಸ್ಪರ್ಧೆ ಆಯೋಜಕರೇ ನೋಡಿಕೊಳ್ಳುತ್ತಿದ್ದರು. ಈಗ ಈ ಸುಂದರ ಒಂಟೆಗಳಿಗಾಗಿ ಪ್ರಪಂಚದ ಮೊದಲ ಒಂಟೆಗಳ ಹೋಟೆಲ್ ಶುರುವಾಗಿದೆ.
ಹೌದು, ರಿಯಾದ್ ಬಳಿ ಒಂಟೆಗಳಿಗಾಗಿ ಐಷಾರಾಮಿ ಓಪನ್ ಏರ್ ಹೋಟೆಲ್ ನಿರ್ಮಾಣವಾಗಿದೆ. ಇಲ್ಲಿ ಸೌದಿಯ ಅತ್ಯಂತ ಸುಂದರವಾದ ಒಂಟೆಗಳ ವಾಸಕ್ಕೆ ಏರ್ಪಾಡು ಮಾಡಲಾಗಿದೆ. ವಾಸ್ತವ್ಯದ ವೇಳೆ ಒಂಟೆಗಳಿಗೆ ಚಳಿಯಾಗದಿರಲಿ ಎಂದು ಹೀಟ್ ಸ್ಟಾಲ್ ಗಳಲ್ಲಿ ಒಂಟೆಗಳನ್ನ ಇರಿಸಲಾಗುತ್ತದೆ. ಅಲ್ಲದೆ ಒಂಟೆಗಳಿಗೆ ಕುಡಿಯಲು ಬಿಸಿಹಾಲನ್ನೇ ನೀಡಲಾಗುತ್ತದೆ. ಒಂಟೆಗಳ ಸೌಂದರ್ಯ ಸ್ಪರ್ಧೆಗೂ ಮೊದಲು ಅವುಗಳ ಸಂಪೂರ್ಣ ದೇಹವನ್ನ ಸ್ಕ್ರಬ್ ಮಾಡಿ ಅಂದಗೊಳಿಸಲಾಗುತ್ತದೆ. ಈ ಸೇವೆಗೆ ಹೋಟೆಲ್ ನವರು ಒಟ್ಟು 400 ರಿಯಾಲ್ (7,875 ರೂ.) ಚಾರ್ಜ್ ಮಾಡುತ್ತಾರೆ.
ಟ್ಯಾಟ್‌ಮ್ಯಾನ್ ಅನ್ನು ವಿಶ್ವದ ಮೊದಲ ಒಂಟೆಗಳ ಹೋಟೆಲ್ ಎಂದು ಹೇಳಲಾಗ್ತಿದೆ, ಕಿಂಗ್ ಅಬ್ದೆಲಾಜಿಜ್ ಉತ್ಸವದ ಸಮೀಪದಲ್ಲೆ ಈ ತೆರೆದ ಹೋಟೆಲ್ ಇದೆ. ಮರಳುಗಾಡಿನಲ್ಲಿರುವ ಈ ಹೋಟೆಲ್ ಗೆ ಒಂಟೆಗಳ ಬ್ಯೂಟಿ ಕಾಂಟೆಸ್ಟ್ ಸಂದರ್ಭದಲ್ಲಿ ಅತಿ ಹೆಚ್ಚು ಲಾಭವಾಗುತ್ತದೆ ಎಂದು ವರದಿಯಾಗಿದೆ. ವಾಸ್ತವವಾಗಿ ಗಲ್ಫ್‌ನಲ್ಲಿ ಒಂಟೆಗಳನ್ನು ಸಾಂಪ್ರದಾಯಿಕ ಜೀವನದ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ಹೋಟೆಲ್ ಲಾಭದಾಯಕ ಉದ್ಯಮದ ತಾರ್ಕಿಕ ಹೆಜ್ಜೆಯಾಗಿದೆ. ಟ್ಯಾಟ್ ಮ್ಯಾನ್ ನಲ್ಲಿ 120 ಆವರಣಗಳಿವೆ. ಕೆಲವು ಸಿಂಗಲ್, ಕೆಲವು ಡಬಲ್, ಪ್ರತಿಯೊಂದರಲ್ಲೂ ನೀರು ಮತ್ತು ಆಹಾರಕ್ಕಾಗಿ ಪ್ಲಾಸ್ಟಿಕ್ ಕಂಟೇನರ್ ಲಭ್ಯವಿದೆ. ಈ ಒಂಟೆಗಳ ಹೋಟೆಲ್ ನಲ್ಲಿ ಕೋವಿಡ್ ನಿಯಮಗಳನ್ನ ಕಟ್ಟುನಿಟ್ಟಾಗಿ ಆಚರಿಸುತ್ತಿದ್ದಾರೆ. ಅಲ್ಲದೇ ಒಂದು ಒಂಟೆಗೆ ಒಬ್ಬ ನೌಕರನನ್ನ ನೇಮಿಸಲಾಗಿದೆ.
ಒಂಟೆಗಳ ಸೌಂದರ್ಯ ಸ್ಪರ್ಧೆಗೆ ಭಾಗವಹಿಸಲು ಬಂದಿರುವ ಸೌದಿಯ ಒಮೈರ್ ಅಲ್-ಖಹ್ತಾನಿ ಎನ್ನವವರು 80 ಒಂಟೆಗಳನ್ನು 16 ದಿನಗಳವರೆಗೆ ಟಾಟ್‌ಮ್ಯಾನ್‌ನಲ್ಲಿ ಇರಿಸಿದ್ದಾರೆ. ಹೋಟೆಲ್ ಅನ್ನ ಹೊಗಳಿರುವ ಅವರು, ಈ ಸೌಲಭ್ಯವು ತುಂಬಾ ಆರಾಮದಾಯಕವಾಗಿದೆ. ಏಕೆಂದರೆ ಒಂಟೆಗಳು ಒಳ್ಳೆ ಆರೈಕೆಯಲ್ಲಿರುತ್ತವೆ. ಅಲ್ಲದೆ ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತವೆ ಎಂದಿದ್ದಾರೆ.