ಮುಂಬೈ: ಕಾಸ್ಟಿಂಗ್ ಕೌಚ್ ನ ಮತ್ತೊಂದು ಘಟನೆಯಲ್ಲಿ ಚಲನಚಿತ್ರಗಳಲ್ಲಿನ ಪಾತ್ರ ನೀಡಿದ್ದಕ್ಕೆ ಪ್ರತಿಯಾಗಿ ನಟಿಯೊಬ್ಬರಿಂದ ಲೈಂಗಿಕ ಬೇಡಿಕೆಯಿಟ್ಟ ನಕಲಿ ನಿರ್ದೇಶಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಟಿಟ್ವಾಲಾ ಪ್ರದೇಶದಲ್ಲಿ ನಕಲಿ ನಿರ್ದೇಶಕನನ್ನು ಬಂಧಿಸಲಾಗಿದೆ. ಆರೋಪಿಗಳು ಖಾಸಗಿ ಚಿತ್ರಗಳನ್ನು ಕೇಳಿದ್ದ. ನಂತರ ಆಕೆ ಬೇಡಿಕೆಯನ್ನು ನಿರಾಕರಿಸಿದಾಗ ಅವುಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಮಲಾಡ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಧನಂಜಯ್ ಲಿಗಾಡೆ ತಿಳಿಸಿದ್ದಾರೆ.
ಮಹಿಳೆ ಕೋಲ್ಕತ್ತಾ ಮೂಲದವರು ಎನ್ನಲಾಗಿದೆ. ಕೆಲವು ಬಂಗಾಳಿ ಚಿತ್ರಗಳಲ್ಲಿ ನಟಿಸಿರುವುದಾಗಿ ನಟಿ ಹೇಳಿಕೊಂಡಿದ್ದಾರೆ. ಕಾಸ್ಟಿಂಗ್ ಡೈರೆಕ್ಟರ್ ಆಕೆಗೆ ವೆಬ್ ಸೀರೀಸ್‌ನಲ್ಲಿ ನಟಿಸಲು ಅವಕಾಶ ಕೊಡುವ ಭರವಸೆ ನೀಡಿದ್ದ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯನ್ನು ಓಂಪ್ರಕಾಶ್ ತಿವಾರಿ ಎಂದು ಗುರುತಿಸಲಾಗಿದೆ, ಅವರು ಈ ಹಿಂದೆ ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಕಾಸ್ಟಿಂಗ್ ಪ್ರಕ್ರಿಯೆ ತಿಳಿದಿದ್ದ. ಮುಂಬೈನಲ್ಲಿ ಪ್ರೊಡಕ್ಷನ್ ಹೌಸ್ ನಡೆಸುತ್ತಿದ್ದೇನೆ ಎಂದು ಪ್ರಕಾಶ್ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆ. ಶನಿವಾರ ರಾತ್ರಿ ನೆರೆಯ ಥಾಣೆ ಜಿಲ್ಲೆಯ ತಿತ್ವಾಲಾದಿಂದ ಮಲಾಡ್ ಪೊಲೀಸರ ಸೈಬರ್ ಸೆಲ್ ಟೀಂ ಆತನನ್ನು ಬಂಧಿಸಿದೆ.
ಸಂತ್ರಸ್ತೆಯ ಪ್ರಕಾರ, ಆರೋಪಿಯು ತನ್ನ ಲೈಂಗಿಕ ಬೇಡಿಕೆಗಳನ್ನು ನಿರಾಕರಿಸಿದರೆ ತನ್ನ ಖಾಸಗಿ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದನೆನ್ನಲಾಗಿದೆ.
ಪೊಲೀಸ್ ಅಧಿಕಾರಿಯ ಪ್ರಕಾರ, ದೂರುದಾರರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಪೋಸ್ ನೀಡಿದ ಪ್ರಕಾಶ್ ತಿವಾರಿ ಅವರನ್ನು ಭೇಟಿಯಾದರು. ಆರೋಪಿ ಆಕೆಗೆ ವೆಬ್ ಸೀರೀಸ್‌ನಲ್ಲಿ ಪಾತ್ರ ನೀಡುವುದಾಗಿ ಹೇಳಿ ಆಕೆಯ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಹೇಳಿದ್ದಾನೆ. ಮಹಿಳೆ ತನ್ನ ಫೋಟೋಗಳನ್ನು ಕಳುಹಿಸಿದ ನಂತರ, ಆರೋಪಿಯು ತನ್ನ ಬೇಡಿಕೆಗಳನ್ನು ನಿರಾಕರಿಸಿದರೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಪ್ರಕಾಶ್ ತಿವಾರಿ ಯಾವುದೇ ಪ್ರೊಡಕ್ಷನ್ ಹೌಸ್ ನಡೆಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 354-ಎ(ಲೈಂಗಿಕ ಕಿರುಕುಳ) ಮತ್ತು 354-ಡಿ(ಹಿಂಬಾಲಿಸುವಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.