![](https://kannadadunia.com/wp-content/uploads/2022/01/Covid19.jpg)
ಓಮಿಕ್ರಾನ್ ಸೋಂಕಿತರು ಹೆಚ್ಚಾಗಿ ಲಕ್ಷಣ ರಹಿತರಾಗಿದ್ದು ಸೋಂಕು ತಗುಲಿದ ನಾಲ್ಕೈದು ದಿನಗಳಲ್ಲೇ ಗುಣಮುಖರಾಗುತ್ತಿದ್ದಾರೆ ಎಂದು ಜೈಪುರದ ಎಸ್ಎಂಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸುಧೀರ್ ಭಂಡಾರಿ ಮಾಹಿತಿ ನೀಡಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ಡಾ. ಸುಧೀರ್ ಭಂಡಾರಿ, ಡೆಲ್ಟಾ ಹಾಗೂ ಓಮಿಕ್ರಾನ್ ಅಲೆಗಳ ನಡುವೆ ತುಂಬಾನೇ ವ್ಯತ್ಯಾಸವಿದೆ. ಡೆಲ್ಟಾ ಅಲೆಯು ಅತ್ಯಂತ ಆಕ್ರಮಣಕಾರಿಯಾಗಿತ್ತು. ಆದರೆ ಓಮಿಕ್ರಾನ್ನಲ್ಲಿ ರೋಗಿಗಳು ಹೆಚ್ಚಾಗಿ ಲಕ್ಷಣ ರಹಿತರಾಗಿದ್ದಾರೆ. ಅಲ್ಲದೇ ಸೋಂಕು ಕೇವಲ ನಾಲ್ಕೈದು ದಿನಗಳಲ್ಲಿ ವಾಸಿಯಾಗುತ್ತಿದೆ ಎಂದು ಹೇಳಿದರು.
ಆದಾಗ್ಯೂ, ಸೋಂಕನ್ನು ಲಘುವಾಗಿ ಪರಿಗಣಿಸಬೇಡಿ ಮತ್ತು COVID-ಸೂಕ್ತ ನಡವಳಿಕೆಯನ್ನು ಅನುಸರಿಸುವಂತೆ ಡಾ. ಭಂಡಾರಿ ಜನರನ್ನು ಒತ್ತಾಯಿಸಿದ್ದಾರೆ.
ಸೋಮವಾರ ರಾಜಸ್ಥಾನದಲ್ಲಿ 6,095 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಜೈಪುರದಲ್ಲಿ ಅತಿ ಹೆಚ್ಚು 2, 749 ಪ್ರಕರಣಗಳು ದಾಖಲಾಗಿವೆ, ನಂತರದ ಸ್ಥಾನದಲ್ಲಿರುವ ಜೋಧ್‌ಪುರ 601 ಪ್ರಕರಣಗಳನ್ನು ದಾಖಲಿಸಿದೆ.