ಒಡಿಯಾದ ಹಿರಿಯ ನಟ ಮಿಹಿರ್ ದಾಸ್ ಜನವರಿ 11 ರಂದು ನಿಧನರಾಗಿದ್ದಾರೆ. ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಒಂದು ತಿಂಗಳ ಹಿಂದೆ ಕಟಕ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವರದಿಗಳ ಪ್ರಕಾರ, ಅವರ ಸ್ಥಿತಿ ಗಂಭೀರವಾಗಿದ್ದರು, ಆ ಸಮಯದಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಅಲ್ಲದೇ, ಮಿಹಿರ್ ದಾಸ್ ರವರು ಕಳೆದ ಕೆಲವು ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಡಯಾಲಿಸಿಸ್‌ಗಾಗಿ ನಿಯಮಿತವಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು ಎಂದು ವರದಿಯಾಗಿದೆ.
ಒಡಿಯಾ ಸಿನಿ ಕಲಾವಿದರ ಸಂಘದ ಕಾರ್ಯದರ್ಶಿ ಶ್ರೀತಮ್ ದಾಸ್ ಅವರು ಮಿಹಿರ್ ದಾಸ್ ಅವರ ಸಾವನ್ನು ಖಚಿತಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅವರು ಕೊನೆಯುಸಿರೆಳೆದಿದ್ದು, ಮಿಹಿರ್ ದಾಸ್ ಅವರ ಪತ್ನಿ ಸಂಗೀತಾ ದಾಸ್ ಮತ್ತು ಮಗ ಆಮ್ಲನ್ ದಾಸ್ ಅವರನ್ನು ಅಗಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ, ದಾಸ್ ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಯಿತು. ಆದರು ಅವರು ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ.
ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಬರಿಪಾಡಾದಲ್ಲಿ ಜನಿಸಿದ ಮಿಹಿರ್ ದಾಸ್ ಸ್ಕೂಲ್ ಮಾಸ್ಟರ್ ಚಿತ್ರದ ಮೂಲಕ ಒಡಿಯಾ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಅವರು ಮಥುರಾ ಬಿಜಯ್ (1979) ನಲ್ಲಿ ಕಾಣಿಸಿಕೊಂಡರು. 1998ರ ಲಕ್ಷ್ಮಿ ಪ್ರತಿಮಾ ಮತ್ತು 2005ರ ಫೆರಿಯಾ ಮೋ ಸುನಾ ಭೌನಿ ಚಿತ್ರದಲ್ಲಿನ ಅಭಿನಯಕ್ಕಾಗಿ ಮಿಹಿರ್ ಅವರಿಗೆ, ರಾಜ್ಯ ಸರ್ಕಾರ ಅತ್ಯುತ್ತಮ ನಟ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ. ಜೊತೆಗೆ, ಮು ಟೇಟ್ ಲವ್ ಕರುಚಿ (2007) ಸಿನಿಮಾಗಾಗಿ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಿಹಿರ್ ಅವರ ಸಾವಿಗೆ ಚಿತ್ರರಂಗದ ಹಲವು ಗಣ್ಯರು ಹಾಗೂ ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.