ಟೆರ್ರಾಸ್ನಲ್ಲಿದ್ದ 2 ತಿಂಗಳ ಹಸುಗೂಸನ್ನು ಕದ್ದೊಯ್ದ ಕೋತಿಗಳ ಗುಂಪು ಆ ಮಗುವನ್ನು ನೀರಿನ ಟ್ಯಾಂಕ್ನಲ್ಲಿ ಎಸೆದ ಪರಿಣಾಮ ಮಗು ಮೃತಪಟ್ಟ ದಾರುಣ ಘಟನೆಯು ಉತ್ತರ ಪ್ರದೇಶದ ಬಾಘ್ಪಾಟ್ ಜಿಲ್ಲೆಯಲ್ಲಿ ಸಂಭವಿಸಿದೆ. ಗರಿ ಕಳಲಂಜರಿ ಗ್ರಾಮದಲ್ಲಿ ಈ ಶಾಕಿಂಗ್ ಘಟನೆಯು ಸಂಭವಿಸಿದೆ.
ಮೃತಪಟ್ಟ ಮಗುವನ್ನು ಕೇಶವ್ ಕುಮಾರ್ ಎಂದು ಗುರುತಿಸಲಾಗಿದೆ. ಟೆರ್ರಾಸ್ನಲ್ಲಿದ್ದ ತನ್ನ ಅಜ್ಜಿಯ ಕೋಣೆಯಲ್ಲಿ ಈ ಮಗು ನಿದ್ರಿಸುತ್ತಿತ್ತು ಎನ್ನಲಾಗಿದೆ. ಆದರೆ ಮನೆಯ ಸದಸ್ಯರು ಕೋಣೆಯ ಬಾಗಿಲು ಹಾಕಲು ಮರೆತಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಮಗುವನ್ನು ದರದರನೇ ಎಳೆದುಕೊಂಡು ಹೋದ ಕೋತಿಗಳು ಗುಂಪು ಈ ಕೃತ್ಯ ಎಸಗಿದೆ. ಕೋಣೆಯಲ್ಲಿ ಮಗು ಇಲ್ಲದ್ದನ್ನು ಗಮನಿಸಿದ ಅಜ್ಜಿಯು ಮನೆಯವರಿಗೆ ಮಾಹಿತಿ ನೀಡಿದರು. ಇದರಿಂದ ಆಘಾತಗೊಂಡ ಕುಟುಂಬ ಮಗುವಿಗಾಗಿ ಹುಡುಕಾಟ ನಡೆಸಿದೆ.
ಬಳಿಕ ಮಗು ವಾಟರ್ ಟ್ಯಾಂಕ್ನಲ್ಲಿ ಶವವಾಗಿ ತೇಲುತ್ತಿರುವುದು ಕುಟುಂಬಸ್ಥರ ಗಮನಕ್ಕೆ ಬಂದಿದೆ. ಕೂಡಲೇ ಮಗುವನ್ನು ದೆಹಲಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಲ್ಲಿ ವೈದ್ಯರು ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆ.
ಕೋತಿಗಳು ತಮ್ಮ ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತವೆ. ಕೆಲ ಸಮಯದ ಹಿಂದೆ ಹೆಣ್ಣು ಕೋತಿಯೊಂದು ತನ್ನ ಮಗುವನ್ನು ಕಳೆದುಕೊಂಡಿತ್ತು. ಅಂದಿನಿಂದ ಈ ಕೋತಿಯು ಮಗುವನ್ನು ತನ್ನ ಮಗುವೆಂದೇ ಭಾವಿಸುತ್ತಿದೆ. ಇದೇ ಕಾರಣದಿಂದ ಮಗುವನ್ನು ಕೋತಿಯು ಎತ್ತಿಕೊಂಡು ಹೋಗಿರಬಹುದು ಎಂದು ಪಶು ವೈದ್ಯಾಧಿಕಾರಿ ಅಮಿತ್ ಸಕ್ಸೆನಾ ಹೇಳಿದರು.