ಬೆಂಗಳೂರು: ಕಾಂಗ್ರೆಸ್ ಹಮ್ಮಿಕೊಂಡಿರುವ ಸುಳ್ಳಿನ ಜಾತ್ರೆ ಈಗ ಕೊರೊನಾ ಮೂರನೇ ಅಲೆಯ ಸೂಪರ್ ಸ್ಪ್ರೆಡರ್ ಆಗುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕ, ಮೇಕೆದಾಟು ಪಾದಯಾತ್ರೆ ಕುರಿತು ವಾಗ್ದಾಳಿ ನಡೆಸಿದೆ.
ಕೊವಿಡ್ ಮೊದಲ ಅಲೆಯ ಸಂದರ್ಭದಲ್ಲಿ ದೇಶವನ್ನು ಕಾಡಿದ್ದ ತಬ್ಲಿಘಿಗಳ ರೀತಿ ಈಗ ಡಿಕೆಶಿ ಸಹೋದರರು ಪಾದಯಾತ್ರೆಯ ನೆಪದಲ್ಲಿ ರಾಜ್ಯದಲ್ಲಿ ಕೊರೊನಾ ಹಂಚುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ ಕೋವಿಡ್ ಯಾತ್ರೆಯಾಗುತ್ತಿದೆ ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.
ಸುಳ್ಳಿನ ಜಾತ್ರೆಯ ಪ್ರಹಸನದಲ್ಲಿ ಇಪ್ಪತ್ತು ನಿಮಿಷ, ಅರ್ಧಗಂಟೆಯ ನಡಿಗೆ ನಾಟಕವಾಡುತ್ತಿರುವ ಕಾಂಗ್ರೆಸ್ ಪುಢಾರಿಗಳು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಅವರೆಲ್ಲರೂ ಕೋವಿಡ್ ಸೋಂಕಿನ ಸಂಭಾವ್ಯ ವಾಹಕಗಳು. ರಾಜಧಾನಿಗೆ ಕೊರೊನಾ ಹಬ್ಬಿಸುವುದೇ ನಿಮ್ಮ ಉದ್ದೇಶವೇನು? ಎಂದು ಪ್ರಶ್ನಿಸಿದೆ.
ಬೆಂಗಳೂರಿಗೆ ನೀರು ಹಂಚುವುದೇ ಪಾದಯಾತ್ರೆ ಉದ್ದೇಶ ಎಂದು ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ವಾಸ್ತವವಾಗಿ ಬೆಂಗಳೂರಿಗೆ ಕೋವಿಡ್ ರಫ್ತು ಮಾಡುತ್ತಿದೆ. ಕೋವಿಡ್ ಸೋಂಕಿತ ಕಾಂಗ್ರೆಸ್ಸಿಗರು ಊರಿಗೆಲ್ಲ ಸೋಂಕು ಹಂಚುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಉಲ್ಬಣಗೊಂಡರೆ ಕಾಂಗ್ರೆಸ್ ತಬ್ಲಿಘಿಗಳೇ ಕಾರಣ ಎಂದು ಕಿಡಿಕಾರಿದೆ.
ಕಾಂಗ್ರೆಸ್ ಪಾದಯಾತ್ರೆ = ತಬ್ಲಿಘಿ. ಇಬ್ಬರೂ ಹರಡುತ್ತಿರುವುದು ಕೋವಿಡ್ ಸೋಂಕು. ತಬ್ಲಿಘಿಗಳು ಮೊದಲನೇ ಅಲೆಗೆ ಕಾರಣವಾದರೆ ಕಾಂಗ್ರೆಸ್ಸಿಗರು ಮೂರನೇ ಅಲೆಗೆ ಕಾರಣವಾಗುತ್ತಿದ್ದಾರೆ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ.