ರಾಜ್ಯ ಸರ್ಕಾರ ಕೊರೊನಾ ಲಸಿಕೆ ಪಡೆದ ಮತ್ತು ಲಸಿಕೆ ಪಡೆಯದವರನ್ನ ಪ್ರತ್ಯೇಕವಾಗಿ ನೋಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮುಂಬೈನ ಲೋಕಲ್ ಟ್ರೈನ್ ನಲ್ಲಿ ಲಸಿಕೆ ಪಡೆಯದವರನ್ನ ಪ್ರಯಾಣಿಸಲು ಬಿಡುತ್ತಿಲ್ಲ ಎಂಬ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ, ವಿಭಾಗೀಯ ಪೀಠ ಈ ಅಭಿಪ್ರಾಯ ಹೊರಹಾಕಿದೆ. ಇದೇ ವೇಳೆ ಆರೋಗ್ಯದ ವಿಷಯದಲ್ಲಿ ಸರ್ಕಾರ, ರಾಜ್ಯ ಅಥವಾ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡರೆ, ಮುಖ್ಯ ನ್ಯಾಯಾಲಯ, ಮಧ್ಯಪ್ರವೇಶಿಸಿ ಆ ನಿರ್ಧಾರಗಳನ್ನು ಎಷ್ಟರ ಮಟ್ಟಿಗೆ ರದ್ದುಗೊಳಿಸಬಹುದು ಎಂದು ಚೀಫ್ ಜಸ್ಟೀಸ್ ದೀಪಂಕರ್ ದತ್ತಾ ಅವರ ನಾಯಕತ್ವದ ವಿಭಾಗೀಯ ಪೀಠ ಪ್ರಶ್ನಿಸಿದೆ.
ಮಹಾರಾಷ್ಟ್ರ ಸರ್ಕಾರ ಜನರ ನಡುವೆ ತಾರತಮ್ಯ ಮಾಡುತ್ತಿದೆ. ಅಲ್ಲದೆ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಮತ್ತು ಸುಪ್ರೀಂ ಕೋರ್ಟ್ ಆದೇಶದ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪಿಐಎಲ್ ಅನ್ನ ಸಲ್ಲಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮಹಾರಾಷ್ಟ್ರ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಅಫಿಡವಿಟ್ ಸಲ್ಲಿಸಿದ್ದಾರೆ.
ವಿಚಾರಣೆ ವೇಳೆ, ಈ ಅಫಿಡವಿಟ್ ಬಗ್ಗೆ ವಕೀಲ ನಿಲೇಶ್ ಒಜಾ ಕಳವಳ ವ್ಯಕ್ತಪಡಿಸಿದ್ದಾರೆ. ಲಸಿಕೆ ಕಡ್ಡಾಯವಲ್ಲ, ಬದಲಿಗೆ ಸ್ವಯಂಪ್ರೇರಿತ ನಿರ್ಧಾರ. ಕೇಂದ್ರ ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಆದೇಶ ಹೊರಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಸುಪ್ರೀಂ ಕೋರ್ಟ್ ಮತ್ತು ಗೋವಾ ಹೈಕೋರ್ಟ್ಗೆ ಸಲ್ಲಿಸಿದ ಕೇಂದ್ರ ಸರ್ಕಾರದ ಅಫಿಡವಿಟ್ಗಳು ವ್ಯಾಕ್ಸಿನೇಷನ್ ಸ್ಥಿತಿಯನ್ನು ಆಧರಿಸಿ ಯಾವುದೇ ತಾರತಮ್ಯ ಮಾಡಬಾರದು ಎಂದು ಸ್ಪಷ್ಟಪಡಿಸಿದೆ ಎಂದು ಓಜಾ ಹೇಳಿದ್ದಾರೆ.
ಅಫಿಡವಿಟ್ ಓದಿದ ನ್ಯಾಯಪೀಠ, ಮಹಾರಾಷ್ಟ್ರ ಸರ್ಕಾರದ ನಿರ್ಧಾರವು ಸಮಂಜಸವಾದ ವರ್ಗೀಕರಣವಲ್ಲವೆಂದು ಪೀಠಕ್ಕೆ ಮನದಟ್ಟು ಮಾಡಿಸಿ ಎಂದು ಮುಖ್ಯ ನ್ಯಾಯಮೂರ್ತಿ, ವಕೀಲ ಓಜಾಗೆ ಸೂಚಿಸಿದ್ದಾರೆ. ನಮ್ಮ ಭಾವನೆಗಳ ಆಧಾರದ ಮೇಲೆ ನಾವು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ವ್ಯಾಕ್ಸಿನೇಷನ್ ಅಗತ್ಯವೆಂದು ಒಬ್ಬರು ಭಾವಿಸಬಹುದು ಮತ್ತು ಅದು ಅಗತ್ಯವಲ್ಲವೆಂದು ಇನ್ನೊಬ್ಬರು ಭಾವಿಸಿದಿರಬಹುದು. ಆದರೆ ಈ ನಿರ್ಧಾರಗಳನ್ನು ಪ್ರಶ್ನಿಸಬಹುದಾದ ಅಧಿಕಾರಿಗಳನ್ನು ನೀವು ತೋರಿಸುತ್ತೀರಿ, ಎಂದಿರುವ ಪೀಠ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.