ವರದಕ್ಷಿಣೆಯ ಬಾಕಿ ಹಣ ನೀಡಿಲ್ಲ ಎಂದು ಮದುವೆಯಾದಾಗಿಂದಲೂ, ಸಂತ್ರಸ್ತೆಯನ್ನ ಪತಿ ಹಾಗೂ ಆತನ ಮನೆಯವರು ಹಿಂಸಿಸುತ್ತಲೆ ಇದ್ದರು. ಒಂದು ಲಕ್ಷ ದುಡ್ಡು, ಬೈಕ್ ಹಾಗೂ ಎರಡೂವರೆ ತೊಲದಷ್ಟು ಚಿನ್ನವನ್ನ ವರದಕ್ಷಿಣೆಯಾಗಿ ಕೊಟ್ಟರೂ, ಉಳಿದ 21 ಸಾವಿರ ನೀಡಿಲ್ಲಾ ಎಂದು ಮಹಿಳೆಯನ್ನ ಪರಿ ಪರಿಯಾಗಿ ಕಾಡಿದ್ದಾರೆ. ಅಷ್ಟೇ ಅಲ್ಲಾ ಆಕೆಯ ಕಪ್ಪು ಬಣ್ಣದ ಬಗ್ಗೆಯೂ ಈ ಕುಟುಂಬಕ್ಕೆ ಅಸಮಾಧಾನವಿತ್ತು ಎಂದು ಹೇಳಲಾಗಿದೆ.
ಗರ್ಭಿಣಿಯಾಗಿದ್ದ ಮಹಿಳೆಯನ್ನ ಇದೇ ವಿಚಾರವಾಗಿ ಗರ್ಭಪಾತ ಮಾಡಲು ಪ್ರಯತ್ನಿಸಲಾಗಿದೆ. ಆಕೆಯ ಹೊಟ್ಟೆಗೆ ಒದ್ದು, ಹಗ್ಗವನ್ನು ಬಳಸಿ ಕತ್ತು ಹಿಸುಕಲು ಪ್ರಯತ್ನಿಸಿದ್ದಾರೆ. ಇದರಿಂದ ಆಕೆಯ ದೇಹಕ್ಕೆ ಹಾನಿಯನ್ನುಂಟಾಗಿದ್ದು, ಗರ್ಭಪಾತಕ್ಕೆ ಕಾರಣವಾಗಿದೆ. ಅಲ್ಲದೆ ಗರ್ಭಿಣಿ ಮಹಿಳೆಗೆ ವಿದ್ಯುತ್ ಶಾಕ್ ಕೂಡ ನೀಡಿದ್ದಾರೆ ಎಂದು ಮೂವರ ವಿರುದ್ಧ ದಾಖಲಾಗಿರುವ ದೂರಿನಿಂದ ತಿಳಿದುಬಂದಿದೆ.
ಮದುವೆಯಾದ ಒಂದೇ ವರ್ಷದಲ್ಲಿ ಆಕೆಯ ಪರಿಸ್ಥಿತಿ ಹೀನಾಯವಾಗಿದೆ. ಮಹಿಳೆಗೆ ಮೂವರು ಯಾವ ಪರಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದರೆ, ಆಕೆಗೆ ಈಗ ನಡೆಯಲು ಸಾಧ್ಯವಾಗುತ್ತಿಲ್ಲ. ಕೋರ್ಟ್ ವಿಚಾರಣೆಗೆ ಬಂದಾಗಲೂ ಆಕೆಯನ್ನ ಎತ್ತಿಕೊಂಡು ಬರಬೇಕಾಯಿತು. ಆಕೆಯ ಕೈ, ಕಾಲುಗಳ ಬೆರಳುಗಳ ಬಾಗಿರುವುದನ್ನ ಗಮನಿಸಿದ ಸೆಷನ್ಸ್ ಕೋರ್ಟ್ ಈ ಮೂವರಿಗೂ ಜೀವಾವಧಿ ಶಿಕ್ಷೆ ನೀಡಿತ್ತು.
ಇದೆಲ್ಲವನ್ನ ಗಮನಿಸಿದ ಹೈಕೋರ್ಟ್ ಇವರ ಮೇಲ್ಮನವಿಯನ್ನ ತಿರಸ್ಕರಿಸಿ, ಸೆಷನ್ಸ್ ನ್ಯಾಯಾಲಯ ನೀಡಿದ ಆದೇಶವನ್ನ ಒಪ್ಪಿ, ಮೂವರನ್ನ ಅಪರಾಧಿಗಳು ಎಂದು ಪರಿಗಣಿಸಿದೆ. ಮೂವರಿಗೂ, ಸೆಕ್ಷನ್ 307 ರ ಅಪರಾಧಕ್ಕಾಗಿ ತಲಾ 25000 ರೂ.ಗಳ ದಂಡದೊಂದಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಐಪಿಸಿಯ ಸೆಕ್ಷನ್ 316 ರ ಅಪರಾಧಕ್ಕಾಗಿ 5 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿದೆ. ಮಹಿಳೆಯ ಅತ್ತೆಗೆ ನೀಡಿದ್ದ ಜಾಮೀನು ಅರ್ಜಿಯನ್ನು ಸಹ ವಜಾಗೊಳಿಸಿದೆ.