ಮಹಿಳೆಯ ಲೈಂಗಿಕ ಸ್ವಾಯತ್ತತೆಯ ಹಕ್ಕಿನ ಜೊತೆಯಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಹೇಳಿದ ದೆಹಲಿ ಹೈಕೋರ್ಟ್ ಎಂತಹದ್ದೇ ಸಂದರ್ಭದಲ್ಲಿಯೂ ಅತ್ಯಾಚಾರದಂತಹ ಕೃತ್ಯಗಳಿಗೆ ಶಿಕ್ಷೆ ಮಾತ್ರ ಕಟ್ಟಿಟ್ಟ ಬುತ್ತಿ. ಅದರಲ್ಲಿ ವಿನಾಯಿತಿ ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದೆ.
ಇದೇ ವೇಳೆಯಲ್ಲಿ ವೈವಾಹಿಕ ಹಾಗೂ ವಿವಾಹೇತರ ಸಂಬಂಧಗಳ ಬಗ್ಗೆಯೂ ಮಾತನಾಡಿದ ದೆಹಲಿ ಹೈಕೋರ್ಟ್, ಈ ಎರಡೂ ಸಂಬಂಧಗಳ ನಡುವೆ ಗುಣಾತ್ಮಕ ವ್ಯತ್ಯಾಸವಿದೆ ಎಂದು ತಿಳಿಸಿದೆ.
ವೈವಾಹಿಕ ಸಂಬಂಧಗಳಲ್ಲಿ ಸಂಗಾತಿಗೆ ಲೈಂಗಿಕ ಸಂಬಂಧಗಳನ್ನು ನಿರೀಕ್ಷಿಸಲು ಕಾನೂನು ಬದ್ಧವಾದ ಹಕ್ಕನ್ನು ನೀಡಲಾಗುತ್ತದೆ. ಅಪರಾಧಿಕ ಕಾನೂನಿನ ವೈವಾಹಿಕ ಅತ್ಯಾಚಾರ ವಿನಾಯಿತಿಯಲ್ಲಿ ಇದೊಂದು ಮಹತ್ವದ ಪಾತ್ರವನ್ನು ವಹಿಸಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸುವಂತೆ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ವಿಭಾಗೀಯ ಪೀಠದ ನ್ಯಾಯಮೂರ್ತಿ ಸಿ ಹರಿ ಶಂಕರ್, ವಿವಾಹೇತರ ಸಂಬಂಧಗಳಲ್ಲಿ ಸಂಗಾತಿಗಳು ಎಷ್ಟೇ ನಿಕಟ ಸಂಬಂಧ ಹೊಂದಿದ್ದರೂ ಸಹ ಅದು ವೈವಾಹಿಕ ಸಂಬಂಧಕ್ಕೆ ಸಮಾನ ಎನಿಸಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಭಾರತೀಯ ದಂಡ ಸಂಹಿತೆ ಕಾಯ್ದೆ 375 ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಇಲ್ಲಿ ಇಷ್ಟವಿಲ್ಲದ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರವೆಂದೇ ಪರಿಗಣಿಸಲಾಗುತ್ತದೆ.
ಉದಾಹರಣೆಯಾಗಿ ಒಂದು ನವವಿವಾಹಿತ ಜೋಡಿಯನ್ನು ತೆಗೆದುಕೊಳ್ಳೋಣ. ಒಂದು ವೇಳೆ ಪತ್ನಿಯು ಇಂದು ಬೇಡ ಎಂದು ಹೇಳಿದರೆ ಅದಕ್ಕೆ ಪತಿ ಸರಿ ಹಾಗಾದರೆ ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಬೆದರಿಸಿದರೆ ಇದು ಕೂಡ ಬಲಾತ್ಕಾರದ ಅಡಿಯಲ್ಲೇ ಬರುತ್ತದೆ.
ಓರ್ವ ಯುವಕ ಹಾಗೂ ಯುವತಿ ಎಷ್ಟೇ ನಿಕಟ ಸಂಬಂಧವನ್ನು ಹೊಂದಿದ್ದರೂ ಸಹ ಲೈಂಗಿಕ ಸಂಬಂಧವನ್ನು ನಿರೀಕ್ಷಿಸುವ ಅಧಿಕಾರ ಇರುವುದಿಲ್ಲ. ನನಗೆ ನಿನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಇಷ್ಟವಿಲ್ಲ ಎಂದು ಹೇಳುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಆದರೆ ಮದುವೆ ವಿಚಾರದಲ್ಲಿ ಲೈಂಗಿಕ ಸಂಬಂಧವನ್ನು ನಿರೀಕ್ಷಿಸಬಹುದು. ಆದರೆ ಇಲ್ಲಿ ಕೂಡ ಬಲಾತ್ಕಾರ ಮಾಡುವಂತಿಲ್ಲ ಎಂದು ನ್ಯಾಯಮೂರ್ತಿ ಶಂಕರ್ ಹೇಳಿದ್ದಾರೆ.
ಯುವಕ – ಯುವತಿ ಮದುವೆಯಾದರೆ ಆಗ ಅವರಿಗೆ ಲೈಂಗಿಕ ಸಂಬಂಧದ ಬಗ್ಗೆ ನಿರೀಕ್ಷೆಯನ್ನು ಹೊಂದಲು ಕಾನೂನಾತ್ಮಕವಾಗಿ ಅಧಿಕಾರವಿರುತ್ತದೆ. ಈ ಕಾರಣಕ್ಕೆ ನೀವು ವಿಚ್ಚೇದನವನ್ನೂ ನೀಡಬಹುದು. ನಿಮ್ಮ ಸಂಗಾತಿಯ ಜೊತೆಯಲ್ಲಿ ಸಾಮಾನ್ಯವಾದ ಹಾಗೂ ಸಹಜವಾದ ಲೈಂಗಿಕ ಸಂಬಂಧವನ್ನು ನಿರೀಕ್ಷೆ ಮಾಡುವುದು ಕಾನೂನು ಬದ್ಧ ಹಕ್ಕಾಗಿದೆ. ಆದರೆ ಲೈಂಗಿಕ ಹಕ್ಕಿನ ಹೆಸರಿನಲ್ಲಿ ಮಹಿಳೆಯ ಲೈಂಗಿಕ ಸ್ವಾತಂತ್ರ್ಯದ ಜೊತೆಯಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಪತ್ನಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಲು ಪತಿಗೆ ಕಾನೂನು ಅವಕಾಶ ನೀಡುವುದಿಲ್ಲ. ಆತ ನಿರೀಕ್ಷೆಯನ್ನು ಹೊಂದಬಹುದಾಗಿದೆ. ಇದೇ ಮದುವೆ ಹಾಗೂ ಲಿವ್ ಇನ್ ರಿಲೇಷನ್ಗಳಂತಹ ಸಂಬಂಧಗಳ ನಡುವೆ ಇರುವ ಗುಣಾತ್ಮಕ ವ್ಯತ್ಯಾಸವಾಗಿದೆ ಎಂದು ಹೇಳಿದರು.