ಬೆಂಗಳೂರು: ಮೇಕೆದಾಟು ಯೋಜನೆಗೆ ಬಿಜೆಪಿ ಸರ್ಕಾರಕ್ಕೆ ಬದ್ಧತೆ ಇದ್ದರೆ ಇಷ್ಟೊತ್ತಿಗಾಗಲೇ ಯೋಜನೆ ಜಾರಿಗೆ ತರುತ್ತಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಿನ್ನೆ ಜ್ವರವಿದ್ದ ಕಾರಣ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಇಂದಿನಿಂದ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದರು. ನಮಗಿಂತ ಮುಂಚೆ ಬಿಜೆಪಿಯವರು ಅಧಿಕಾರದಲ್ಲಿದ್ದರು. ಆಗ ಬಿಜೆಪಿಗೆ ಬದ್ಧತೆ ಇದ್ದರೆ ಯೋಜನೆ ಜಾರಿಗೆ ತರುತ್ತಿದ್ದರು. ಆದರೆ ಬಿಜೆಪಿಯವರಿಗೆ ಯೋಜನೆ ಜಾರಿ ಬೇಕಾಗಿಲ್ಲ ಈಗ ಕಾಂಗ್ರೆಸ್ ವಿರುದ್ಧ ವಿಳಂಬ ಆರೋಪ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಕಾವೇರಿ ವಿವಾವ ಹಿನ್ನೆಲೆಯಲ್ಲಿ ಯೋಜನೆ ಆರಂಭಿಸಲು ಆಗಿಲ್ಲ ಎಂದು ಬಿಜೆಪಿಯವರು ನೆಪ ಹೇಳುತ್ತಿದ್ದಾರೆ. ಅವರ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ವಿಳಂಬ ಮಾಡಿತು ಎಂಬ ಆರೋಪ ಮಾಡುತ್ತಿದ್ದಾರೆ. ಸಚಿವ ಕಾರಜೋಳ ಪ್ರತಿದಿನ ಜಾಹಿರಾತು ನೀಡುತ್ತಾ ಕಾಂಗ್ರೆಸ್ ವಿಳಂಬದಿಂದ ಯೋಜನೆ ವಿಳಂಬ ಎನ್ನುತ್ತಿದ್ದಾರೆ. ಮೇಕೆದಾಟು ಯೋಜನೆ ಆರಂಭವಾದದ್ದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ರೈತರಿಗೆ ಹಾಗೂ ಬೆಂಗಳೂರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಯೋಜನೆ ರೂಪಿಸಿದೆವು ಎಂದರು.
ಮೇಕೆದಾಟು ಯೋಜನೆಗಾಗಿ ಡಿಪಿಆರ್ ಸಿದ್ಧಪಡಿಸಿದ್ದು ನಾವು, ಅದನ್ನು ಸಿಡಬ್ಲ್ಯುಸಿಗೆ ಕಳುಹಿಸಿದ್ದೂ ಕೂಡ ನಾವು. ಆಗ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಹೊಸ ಡಿಪಿಆರ್ ಸಿದ್ಧಪಡಿಸಿದರು. ಇಷ್ಟೆಲ್ಲ ಮಾಡಿದ್ದು ನಾವು ಬಿಜೆಪಿಯವರು ಮಾಡಿದ್ದೇನು ? ನೀವೇನು ಮಾಡಿದ್ದೀರಿ ಮಿಸ್ಟರ್ ಕಾರಜೋಳ ? ಎಂದು ಪ್ರಶ್ನಿಸಿದರು.
ಕೇಂದ್ರ, ರಾಜ್ಯ ಎರಡೂ ಕಡೆಯಲ್ಲಿಯೂ ನಿಮ್ಮ ಸರ್ಕಾರವಿದೆ. ಆದರೂ ಮೇಕೆದಾಟು ಯೋಜನೆ ಜಾರಿ ಮಾಡಿಲ್ಲವೇಕೆ ? ಎರಡುವರೆ ವರ್ಷದಿಂದ ವಿಳಂಬ ಮಾಡುತ್ತಿರುವುದಾದರೂ ಏಕೆ ? ರಾಜ್ಯದ ಜನ 25 ಸಂಸದರನ್ನು ಆಯ್ಕೆ ಮಾಡಿದ್ದಾರೆ ಆದರೂ ನಿಮ್ಮಿಂದ ಒಂದು ಯೋಜನೆ ಜಾರಿಗೆ ತರಲು ಸಾಧ್ಯವಾಗಿಲ್ಲ ಎಂದು ಕಿಡಿಕಾರಿದ್ದಾರೆ.