ನವದೆಹಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸ್ಥಾಪಿಸಿರುವ ಹೊಸ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಹಾಕಿ ಸ್ಟಿಕ್, ಬಾಲ್ ಚಿಹ್ನೆ ನೀಡಲಾಗಿದೆ.
ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಹೊಸದಾಗಿ ಪ್ರಾರಂಭಿಸಿದ ರಾಜಕೀಯ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್ ಗೆ ಪಕ್ಷದ ಚುನಾವಣಾ ಚಿಹ್ನೆಯಾಗಿ ‘ಹಾಕಿ ಸ್ಟಿಕ್ ಮತ್ತು ಬಾಲ್’ ನಿಗದಿಪಡಿಸಲಾಗಿದೆ.
ಭಾರತದ ಚುನಾವಣಾ ಆಯೋಗವು ಇತ್ತೀಚೆಗಷ್ಟೇ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್ ಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ 7 ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ವೇಳಾಪಟ್ಟಿಯ ಪ್ರಕಾರ, ಫೆಬ್ರವರಿ 14 ರಂದು ಪಂಜಾಬ್ ಚುನಾವಣೆ ನಡೆಯಲಿದೆ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ನವೆಂಬರ್ 2021 ರಲ್ಲಿ ನವಜೋತ್ ಸಿಂಗ್ ಸಿಧು ಅವರೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದ ಪಕ್ಷವನ್ನು ತೊರೆದು ಪಂಜಾಬ್ ಲೋಕ ಕಾಂಗ್ರೆಸ್ ಸ್ಥಾಪಿಸಿದ್ದಾರೆ.
ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿವೆ.