ಮಡಿಕೇರಿ : ನಿಧಿ ಆಸೆಗಾಗಿ ಯುವಕನೊಬ್ಬ ತನ್ನ ಬೆಡ್ ರೂಂನಲ್ಲಿ 15 ಅಡಿ ಆಳದ ಗುಂಡಿ ತೋಡಿ ಸಿಕ್ಕಿ ಬಿದ್ದಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ.
ಈ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಹತ್ತಿರದ ಒಳಮಾಳ ಕೋಟೆ ಪೈಸಾರಿ ಎಂಬಲ್ಲಿ ನಡೆದಿದೆ. ಈ ಯುವಕ ನಿಧಿ ಇದೆ ಎಂಬ ಮಾತನ್ನು ನಂಬಿ ಬೆಡ್ ರೂಂನಲ್ಲಿ ಗುಂಡಿ ತೊಡಿದ್ದಾನೆ. ಅಲ್ಲದೇ ಕೋಳಿ ಸೇರಿದಂತೆ ಕೆಲವು ವಸ್ತುಗಳನ್ನು ಬಲಿ ಕೊಟ್ಟಿದ್ದಾನೆ. ದೊಡ್ಡ ವಸ್ತುವೊಂದನ್ನು ಬಲಿ ಕೊಡಲು ತಯಾರಿ ಕೂಡ ನಡೆಸಿದ್ದ ಎನ್ನಲಾಗಿದೆ.
ಈಗಾಗಲೇ 15 ಅಡಿ ಆಳದ ಗುಂಡಿ ತೋಡಿದ್ದ ಆತ ಇನ್ನು ಕೆಲವೇ ಅಡಿ ಗುಂಡಿ ತೋಡಿದ್ದರೆ, ಮನೆಯೇ ಕುಸಿದು ಬೀಳುವ ಸಾಧ್ಯತೆ ಇತ್ತು. ಅಷ್ಟರಲ್ಲಿಯೇ ಪೊಲೀಸರು ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ.
ರಮೇಶ್ ಎಂಬುವವರ ಪುತ್ರ ಎಂ.ಆರ್. ಗಣೇಶ್(23) ಎಂಬ ಯುವಕನೇ ಈ ರೀತಿ ಗುಂಡಿ ತೋಡಿದವ. ಈತನೊಂದಿಗೆ ಉಡುಪಿ ಜಿಲ್ಲೆಯ ಪಡುಬಿದ್ರಿ ಹಂಚಿನಡ್ಕದ ಬಿ.ಕೆ. ಸಾಧಿಕ್(42) ಎಂಬ ವ್ಯಕ್ತಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ವಾಮಾಚಾರಿಗಳ ಮಾತು ನಂಬಿದ್ದ ಈ ವ್ಯಕ್ತಿ, ಬೆಡ್ ರೂಂನಲ್ಲಿ ಗುಂಡಿ ತೋಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.