ಸೋಂಕು ಇದ್ದರೂ ಮನೆಯಲ್ಲಿ ಸ್ನೇಹಿತರನ್ನ ಸೇರಿಸಿಕೊಂಡು ಪಾರ್ಟಿ ಮಾಡಿದ್ದವರ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರತ್ಲಾಮ್ ನಗರದ ಕಂಟೈನ್ಮೆಂಟ್ ಝೋನ್ ನಲ್ಲಿರುವ ತನ್ನ ಮನೆಯಲ್ಲಿ ಕೋವಿಡ್ ಸೋಂಕಿತ ಹಾಗೂ ಆತನ ಸ್ನೇಹಿತರು ಪಾರ್ಟಿ ಮಾಡುತ್ತಿದ್ದರು, ಕೋವಿಡ್ ನಿಯಮ ಉಲ್ಲಂಘನೆ ಅಡಿಯಲ್ಲಿ ಅವ್ರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಮಧ್ಯಪ್ರದೇಶದ ಪೊಲೀಸರು ತಿಳಿಸಿದ್ದಾರೆ.
ರತ್ಲಾಮ್ ನ ನಿರಾಲಾ ನಗರದ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಆ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆ ವಲಯವನ್ನ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಕೋವಿಡ್ ಪಾಸಿಟಿವ್ ವ್ಯಕ್ತಿ ಮತ್ತು ಅವನ ಸ್ನೇಹಿತರು ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದಾರೆ ಎಂದು ನಮಗೆ ಭಾನುವಾರ ಮಾಹಿತಿ ಸಿಕ್ಕಿತು. ನಾವು ಅಲ್ಲಿಗೆ ತಪಾಸಣಾ ತಂಡವನ್ನು ಕಳುಹಿಸಿ, ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಎಲ್ಲರನ್ನೂ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಿದ್ದೇವೆ ಎಂದು ತಹಸೀಲ್ದಾರ್ ಗೋಪಾಲ್ ಸೋನಿ ತಿಳಿಸಿದ್ದಾರೆ.
ಇಂಡಸ್ಟ್ರಿಯಲ್ ಏರಿಯಾ ಪೊಲೀಸ್ ಠಾಣೆಯಲ್ಲಿ, ಸೋಂಕಿತ ಹಾಗೂ ಅವನ ಸ್ನೇಹಿತರ ವಿರುದ್ಧ, ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.