ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಕಾಶಿ ವಿಶ್ವನಾಥ ಧಾಮದಲ್ಲಿ ಕೆಲಸ ಮಾಡುವವರಿಗೆ 100 ಜೋಡಿ ಸೆಣಬಿನ(Jute) ಪಾದರಕ್ಷೆಗಳನ್ನು ಕಳುಹಿಸಿದ್ದಾರೆ.
ಸರ್ಕಾರಿ ಮೂಲಗಳ ಪ್ರಕಾರ, ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆಂದು ವಾರಣಾಸಿಗೆ ಭೇಟಿ ನೀಡಿದಾಗ, ದೇವಾಲಯದಲ್ಲಿ ಕೆಲಸ ಮಾಡುವ ಹೆಚ್ಚಿನ ಜನರು ತಮ್ಮ ಕರ್ತವ್ಯವನ್ನು ಬರಿಗಾಲಿನಲ್ಲಿ ನಿರ್ವಹಿಸುತ್ತಿರುವುದನ್ನ ಪ್ರಧಾನಿ ಮೋದಿ ಗಮನಿಸಿದ್ದರು.
ದೇವಾಲಯದ ಆವರಣದಲ್ಲಿ ಚರ್ಮ ಅಥವಾ ರಬ್ಬರ್ನಿಂದ ಮಾಡಿದ ಪಾದರಕ್ಷೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಅರ್ಚಕರು, ಸೇವೆ ಮಾಡುವ ಜನರು, ಭದ್ರತಾ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು ಮತ್ತು ಇತರರು ಸೇರಿದಂತೆ ಯಾರೂ ಈ ಆದೇಶದಿಂದ ಹೊರತಾಗಿಲ್ಲ.
ಹೀಗಾಗಿ, ಪ್ರಧಾನ ಮಂತ್ರಿಗಳು ತಕ್ಷಣವೇ 100 ಜೋಡಿ ಸೆಣಬಿನ ಪಾದರಕ್ಷೆಗಳನ್ನು ಖರೀದಿಸಿ ಕಾಶಿ ವಿಶ್ವನಾಥ ಧಾಮಕ್ಕೆ ಕಳುಹಿಸಿದರು, ಇದರಿಂದ ಧಾಮದಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವವರು ಶೀತ ವಾತಾವರಣದಲ್ಲಿ ಬರಿಗಾಲಿನಲ್ಲಿ ಕಾರ್ಯ ನಿರ್ವಹಿಸಬೇಕಿಲ್ಲ.
ಪ್ರಧಾನಿಯವರು ತಮಗೆ ಪಾದರಕ್ಷೆ ಕಳುಹಿಸಿದ್ದಾರೆಂದು ತಿಳಿದು ಕಾಶಿ ವಿಶ್ವನಾಥ ಧಾಮದಲ್ಲಿನ ಜನರು ತುಂಬಾ ಖುಷಿಪಟ್ಟರು. ಕಳೆದ ತಿಂಗಳು ವಾರಣಾಸಿಗೆ ಎರಡು ದಿನಗಳ ಭೇಟಿ ಕೊಟ್ಟ ಸಂದರ್ಭದಲ್ಲಿ, ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಿಸಿದ ಕಾರ್ಮಿಕರ ಮೇಲೆ ಪ್ರಧಾನಿ ಅವರು ಹೂವಿನ ದಳಗಳನ್ನು ಸುರಿಸಿ ನಂತರ ಅವರೊಂದಿಗೆ ಊಟ ಮಾಡಿದ್ದರು.