ಮೊದಲೇ ಒಮಿಕ್ರಾನ್ ಆಗಮನದಿಂದ ಭಯದಲ್ಲಿರುವ ಯೂರೋಪ್ ಮತ್ತು ಅಮೆರಿಕದಲ್ಲಿ ಇದೀಗ, ಕೋವಿಡ್ನ ರೂಪಾಂತರಿಗಳಾದ ಡೆಲ್ಟಾ ಮತ್ತು ಒಮಿಕ್ರಾನ್ಗಳ ಅಡ್ಡತಳಿ ’ಡೆಲ್ಟಾಕ್ರಾನ್’ ಅಥವಾ ’ಡೆಲ್ಮಿಕ್ರಾನ್’ ಬಂದಿದೆ ಎಂಬ ವರದಿಗಳು ಕಳೆದ ಕೆಲ ದಿನಗಳಿಂದ ಇನ್ನಷ್ಟು ಆಘಾತ ಮೂಡಿಸಿವೆ.
ಬಹುಶಃ ಪಾಶ್ಚಾತ್ಯ ಜಗತ್ತಿನಲ್ಲಿ ಡೆಲ್ಟಾ ಮತ್ತು ಒಮಿಕ್ರಾನ್ನ ಅವಳಿ ಸ್ಪೈಕ್ಗಳು ಸೃಷ್ಟಿಯಾಗಿರುವ ಸಾಧ್ಯತೆಗಳು ಇವೆ ಎಂದು ಮಹಾರಾಷ್ಟ್ರದ ಕೋವಿಡ್-19 ಟಾಸ್ಕ್ ಫೋರ್ಸ್ನ ಸದಸ್ಯರಲ್ಲಿ ಒಬ್ಬರಾದ ಡಾ. ಶಶಾಂಕ್ ಜೋಶಿ ತಿಳಿಸಿದ್ದಾರೆ.
ಭಾರಿ ಹಿಮಪಾತದ ನಡುವೆ ಬೆರಗುಗೊಳಿಸಿದ ಸೂರ್ಯ..! ಅದ್ಭುತ ದೃಶ್ಯ ಕಂಡು ವ್ಹಾವ್ ಎಂದು ಉದ್ಘರಿಸಿದ ಜನ
“ಡೆಲ್ಟಾ ಮತ್ತು ಒಮಿಕ್ರಾನ್ನ ಅವಳಿ ಸ್ಪೈಕ್ ಆದ ಡೆಲ್ಮಿಕ್ರಾನ್ನಿಂದಾಗಿ ಯೂರೋಪ್ ಮತ್ತು ಅಮೆರಿಕಗಳಲ್ಲಿ ಹೊಸ ಕೇಸುಗಳ ಸುನಾಮಿಯೇ ಆಗಿಬಿಟ್ಟಿದೆ,’’ ಎಂದಿದ್ದಾರೆ ಡಾ. ಶಶಾಂಕ್ ಜೋಶಿ.
ಈ ಡೆಲ್ಮಿಕ್ರಾನ್ ಕೋವಿಡ್ನ ಹೊಸ ರೂಪಾಂತರಿ ಅಲ್ಲ. ಆದರೆ ಡೆಲ್ಟಾ ಮತ್ತು ಒಮಿಕ್ರಾನ್ಗಳ ಸ್ಟ್ರೇನ್ಗಳು ಅಡ್ಡ-ಕಸಿಯಾಗಿ ಹುಟ್ಟಿಕೊಂಡಿರುವ ಹೊಸ ರೂಪಾಂತರಿಯಾಗಿದೆ.
ಇದೇ ವೇಳೆ, ಕಳೆದ ತಿಂಗಳಲ್ಲಿ, ಅಮೆರಿಕದಲ್ಲಿ ದಾಖಲಾದ ಎಲ್ಲಾ ಕೋವಿಡ್ ಕೇಸುಗಳ ಪೈಕಿ 1%ನಷ್ಟು ಮಾತ್ರವೇ ಇದ್ದ ಡೆಲ್ಟಾ ಇದೀಗ ಅಲ್ಲಿ ಬಾಧಿಸುತ್ತಿರುವ ಸೋಂಕಿನ 74% ಹೊಣೆಯನ್ನು ಹೊತ್ತಿದೆ.
ಅದಾಗಲೇ ಹವಾ ಎಬ್ಬಿಸಿದ್ದ ಡೆಲ್ಟಾವತಾರಿ ಕೋವಿಡ್ ಹಾಗೂ ಒಮಿಕ್ರಾನ್ಗಳ ಸ್ಟ್ರೇನ್ಗಳು ಕೂಡಿಕೊಂಡು ಹೊಸದೊಂದು ಸೂಪರ್ ವೈರಾಣು ಸೃಷ್ಟಿಯಾಗಬಲ್ಲದೇ ಎಂಬ ಪ್ರಶ್ನೆಗಳು ಇದೀಗ ದೊಡ್ಡದಾಗಿ ಎದ್ದಿವೆ. ಮೊಡೆರ್ನಾದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಪೌಲ್ ಬರ್ಟನ್ ಪ್ರಕಾರ ಇದು ಸಾಧ್ಯ.
ಬ್ರಿಟನ್ ಸಂಸತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯೆದುರು ಹಾಜರಾದ ಬರ್ಟನ್, ಯಾರಿಗಾದರೂ ಒಮಿಕ್ರಾನ್ ಮತ್ತು ಡೆಲ್ಟಾಗಳು ಒಮ್ಮೆಗೆ ಅಟಕಾಯಿಸಿಕೊಂಡರೆ ಹೊಸ ಸ್ಟ್ರೇನ್ ಉತ್ಪತ್ತಿಯಾಗಬಹುದು ಎಂದಿದ್ದಾರೆ.
“ಖಂಡಿತವಾಗಿಯೂ ಮಾಹಿತಿ ಇದೆ, ರೋಗನಿರೋಧಕ ಶಕ್ತಿ ರಾಜಿಯಾಗಿರುವ ಮಂದಿಯಲ್ಲಿ ಎರಡೂ ಬಗೆಯ ವೈರಾಣುಗಳು ಕಾಣುವ ಸಾಧ್ಯತೆ ಇದೆ ಎಂದು ದಕ್ಷಿಣ ಆಫ್ರಿಕಾದಲ್ಲಿ ಪ್ರಕಟಗೊಂಡ ಕೆಲ ಪತ್ರಿಕೆಗಳು ಇದನ್ನು ತಿಳಿಸುತ್ತಿವೆ,” ಎಂದು ಡಾ. ಬರ್ಟನ್ ಹೇಳಿದ್ದಾಗಿ ಡೈಲಿ ಮೇಲ್ ತಿಳಿಸಿದೆ.
ಎರಡೂ ವೈರಾಣುಗಳು ತಮ್ಮಲ್ಲಿರುವ ಸ್ಟ್ರೇನ್ಗಳನ್ನು ಅದಲುಬದಲು ಮಾಡಿಕೊಂಡು ಇನ್ನಷ್ಟು ಅಪಾಯಕಾರಿ ವೈರಾಣು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಬರ್ಟನ್ ಸಂಸದರಿಗೆ ತಿಳಿಸಿದ್ದಾರೆ. ಹೀಗೆ ಆಗುವ ಸಾಧ್ಯತೆ ತೀರಾ ವಿರಳವಾಗಿದ್ದರೂ, ಒಂದೊಮ್ಮೆ ಹಾಗೇನಾದರೂ ಆಗಿಬಿಟ್ಟರೆ ನಿಯಂತ್ರಣ ಮೀರಿದ ಘಟನಾವಳಿಗಳು ಆಗಿಬಿಡಲಿವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಬ್ರಿಟನ್ನಲ್ಲಿ ಒಮಿಕ್ರಾನ್ ಮತ್ತು ಡೆಲ್ಟಾ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಡುವೆ ಈ ಸಾಧ್ಯತೆ ದಟ್ಟೈಸುತ್ತಿದೆ ಎನ್ನುತ್ತಾರೆ ಬರ್ಟನ್. ಬ್ರಿಟನ್ನಲ್ಲಿ ಶುಕ್ರವಾರದಂದು ಹೊಸ ಅವತಾರಿ ಕೋವಿಡ್ನ 3,201 ಪ್ರಕರಣಗಳು ದಾಖಲಾಗಿವೆ. ಇದು ದೇಶದಲ್ಲಿ ಒಮಿಕ್ರಾನ್ ಪತ್ತೆಯಾದಾಗಿನಿಂದ ದಾಖಲಾದ ಅತಿ ದೊಡ್ಡ ಸಂಖ್ಯೆಯಾಗಿದೆ.