ಬೆಂಗಳೂರು : ಕೊಲೆ ಆರೋಪದಲ್ಲಿ ಶಿಕ್ಷೆ ಅನುಭವಿಸಿ, ಜೈಲಿನಿಂದ ಹೊರಗೆ ಬಂದಿದ್ದ ವ್ಯಕ್ತಿಯೊಬ್ಬ ಹಣಕ್ಕಾಗಿ ಅಡ್ಡ ಮಾರ್ಗ ಹಿಡಿದು ಯುವತಿಗೆ ವಂಚಿಸಿರುವ ಕುರಿತು ದೂರು ದಾಖಲಾಗಿದೆ.
ಲೈನ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಭೀಮರಾಜ್ ಎಂಬ ವ್ಯಕ್ತಿಯೊಬ್ಬ ಯುವತಿಗೆ ಹೆಸ್ಕಾಂನಲ್ಲಿ ಕೆಲಸ ಕೊಡಿಸುವುದಾಗಿ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಯುವತಿ ದೂರು ದಾಖಲಿಸಿದ್ದಾರೆ.
ಈ ವ್ಯಕ್ತಿ ವಿಜಯಪುರ ಮೂಲದವನು ಎಂದು ಗುರುತಿಸಲಾಗಿದ್ದು, ಆನ್ ಲೈನ್ ಮೂಲಕ ಯುವತಿಯರನ್ನು ವಂಚಿಸುತ್ತಿದ್ದ. ಹೆಸ್ಕಾಂನಲ್ಲಿ ಕೆಲಸ ಕೊಡಿಸುವುದಾಗಿ ಈತ ಯುವತಿಯರಿಗೆ ವಂಚಿಸಿದ್ದ. ರಾಜ್ಯದ ಹಲವು ಜಿಲ್ಲೆಗಳ ಯುವತಿಯರಿಗೆ ಕೂಡ ಈತ ವಂಚಿಸಿದ್ದಾನೆ. ಹೀಗೆ ವಂಚಿಸಿದ ಆರೋಪಿ ಅವರಿಂದ 21.30 ಲಕ್ಷ ರೂಪಾಯಿ ಪೀಕಿದ್ದಾನೆ.
ಮದುವೆಗಾಗಿ ವರ ಹುಡುಕಾಡುತ್ತಿದ್ದ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಈ ವ್ಯಕ್ತಿ, ಪರೀಕ್ಷೆ ಇಲ್ಲದೆ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ. ಗೌರವಕ್ಕೆ ಅಂಜಿ ವಂಚನೆಗೊಳಗಾದ ಕೆಲವರು ಈ ಕುರಿತು ಬಾಯಿ ಬಿಟ್ಟಿಲ್ಲ. ಆದರೆ, ನಗರದ ಯುವತಿಯೊಬ್ಬರು ಈ ಕುರಿತು ದೂರು ನೀಡಿದಾಗ, ಈತನ ಕೃತ್ಯ ಬಯಲಿಗೆ ಬಂದಿದೆ.
ಈ ವ್ಯಕ್ತಿ ಹಿಂದೆ ಜೈಲಿಗೆ ಕೂಡ ಹೋಗಿ ಬಂದಿದ್ದ. ಹೆಸ್ಕಾಂನಲ್ಲಿ ಲೈನ್ ಮ್ಯಾನ್ ಆಗಿದ್ದ ಸಂದರ್ಭದಲ್ಲಿ ಯುವತಿಯನ್ನು ಕೊಲೆ ಮಾಡಿ ಜೈಲು ಸೇರಿ ಬಿಡುಗಡೆಯಾಗಿ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.